ಸಂಸಾರ ಜೀವನ ತ್ಯಜಿಸಿ ಸನ್ಯಾಸತ್ವ ದೀಕ್ಷೆ ಪಡೆದ ಇಂಜಿನಿಯರಿಂಗ್ ವಿದ್ಯಾರ್ಥಿನಿ!
Views: 87
ಕನ್ನಡ ಕರಾವಳಿ ಸುದ್ದಿ: ಇಂಜಿನಿಯರಿಂಗ್ ಪದವಿಯಲ್ಲಿ ಟಾಪರ್ ಆಗಿದ್ದ ಯುವತಿಯೊಬ್ಬರು ಭೌತಿಕ ಸುಖ, ಐಷಾರಾಮಿ ಜೀವನ ಮತ್ತು ಉಜ್ವಲ ವೃತ್ತಿಜೀವನವನ್ನು ಬದಿಗೊತ್ತಿ ಜೈನ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಮುಖೇಶ್ ಕುಮಾರ್ ಹಾಗೂ ಸುನೀತಾ ದಂಪತಿಯ ಪುತ್ರಿ ಆಂಚಲ್ ಕುಮಾರಿ (26) ಜೈನ ದೀಕ್ಷೆ ಪಡೆದವರು.
ದಾವಣಗೆರೆಯ ಪ್ರತಿಷ್ಠಿತ ಬಿಐಇಟಿ ಕಾಲೇಜಿಗೆ ಟಾಪರ್ ಆಗಿದ್ದ ಆಂಚಲ್, ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಹೆಸರು ಮಾಡಿದ್ದರು. ಇಂದು (ಫೆ.6) ಸೂರತ್ನಲ್ಲಿ ತಂದೆ-ತಾಯಿಯ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜೈನ ಸನ್ಯಾಸತ್ವ ದೀಕ್ಷೆ ಸ್ವೀಕರಿಸಿದ್ದಾರೆ.
ಪುತ್ರಿ ತೆಗೆದುಕೊಂಡ ನಿರ್ಧಾರಕ್ಕೆ ಪೋಷಕರು ಖುಷಿಯಿಂದ ಒಪ್ಪಿಕೊಂಡಿದ್ದಲ್ಲದೇ ತಾವೇ ಮುಂದೆ ನಿಂತು ದೀಕ್ಷೆ ಕೊಡಿಸಿದರು. ಇತ್ತೀಚಿಗೆ ಆಂಚಲ್ ಕುಮಾರಿ ಆಧ್ಯಾತ್ಮದೆಡೆ ವಿಶೇಷ ಇಚ್ಛೆ ವ್ಯಕ್ತಪಡಿಸಿದ್ದರು. ಸಂಸಾರ ಜೀವನಕ್ಕಿಂತ ಸನ್ಯಾಸತ್ವ ಜೀವನವೇ ಶ್ರೇಷ್ಠ ಎಂದುಕೊಂಡಿದ್ದರು ಎಂದು ಅವರ ಕುಟುಂಬ ಮೂಲಗಳಿಂದ ತಿಳಿದುಬಂದಿದೆ.
ಆಂಚಲ್ ಕುಮಾರಿ ಅವರು ಗುಜರಾತ್ ರಾಜ್ಯದ ಸೂರತ್ನಲ್ಲಿಂದು ಗುರುಗಳಾದ ಕುಲಚಂದ್ರ ಸುರೇಶ್ವರ್ ಜೀ ಮಹಾರಾಜ್ ಇವರಿಂದ ದೀಕ್ಷೆ ಸ್ವೀಕರಿಸಿದರು. ತಂದೆ ಮುಖೇಶ್ ಕುಮಾರ್, ತಾಯಿ ಸುನೀತಾ ಸೇರಿದಂತೆ ಸಂಬಂಧಿಕರು ಉಪಸ್ಥಿತರಿದ್ದರು.






