ಧಾರ್ಮಿಕ

ದುಷ್ಟ ಶಕ್ತಿ ನಿವಾರಿಸಲು ಪೂಜೆ ನೆಪದಲ್ಲಿ ನಕಲಿ ಬಾಬಾನಿಂದ ಮಹಿಳೆಗೆ ರೂ.2.50 ಕೋಟಿ ವಂಚನೆ

Views: 0

ಕನ್ನಡ ಕರಾವಳಿ ಸುದ್ದಿ: ದುಷ್ಟ ಶಕ್ತಿ ನಿವಾರಿಸಲು ವಿಶೇಷ ಪೂಜೆ ಮಾಡುವ ನೆಪದಲ್ಲಿ ಕೋಟ್ಯಂತರ ರೂಪಾಯಿ ಹಣದಾಸೆ ತೋರಿಸಿ ಮಹಿಳೆಯೊಬ್ಬರಿಗೆ ರೂ.2.50 ಕೋಟಿ ವಂಚಿಸಲಾಗಿದೆ.

ಚಾಮರಾಜಪೇಟೆಯ ನಿವಾಸಿ ಕುಮುದಾ ಅವರ ದೂರು ಆಧರಿಸಿ ನಕಲಿ ಬಾಬಾ ಅಪ್ಸರ್‌ ಪಾಷಾ, ಮಧ್ಯವರ್ತಿಗಳಾದ ಶಂಕರ್ ಹಾಗೂ ಭರತ್ ವಿರುದ್ಧ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

ಕುಮುದಾ ಅವರ ಪುತ್ರ ದ್ವಿಚಕ್ರ ವಾಹನ ಅಪಘಾತವೊಂದರಲ್ಲಿ ಇತ್ತೀಚೆಗೆ ಗಾಯಗೊಂಡಿದ್ದರು. ಸಾಲ ಪಡೆಯುವ ವಿಚಾರದಲ್ಲಿ ಮಧ್ಯವರ್ತಿಗಳಾದ ಶಂಕರ್ ಮತ್ತು ಭರತ್ ಅವರ ಪರಿಚಯವಾಗಿತ್ತು. ಅವರ ಮಗ ಅಪಘಾತದಲ್ಲಿ ಗಾಯಗೊಂಡಿದ್ದನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು, ‘ನಿಮ್ಮ ಮಗನಿಗೆ ಅಪಘಾತವಾಗಲು ಮನೆಯಲ್ಲಿರುವ ದುಷ್ಟ ಶಕ್ತಿಗಳೇ ಕಾರಣ. ಪರಿಚಯವಿರುವ ಗುರೂಜಿ ಅಪ್ಸರ್‌ ಪಾಷಾ ಅವರನ್ನು ಸಂಪರ್ಕಿಸಬೇಕು’ ಎಂದು ಸಲಹೆ ನೀಡಿದ್ದರು.

ಪೂಜೆ ಹೆಸರಿನಲ್ಲಿ ಆರಂಭದಲ್ಲೇ ರೂ.8 ಲಕ್ಷ ಪಡೆದಿದ್ದ ಅಪ್ಸರ್‌, ಮನೆಯಲ್ಲಿ ಪೂಜೆಗಳನ್ನು ನಡೆಸಿದ್ದ. ಇದಾದ ನಂತರ ವಂಚಕರು ‘ರಿಸರ್ವ್ ಬ್ಯಾಂಕ್‌ನಿಂದ ನಮಗೆ ರೂ.500 ಕೋಟಿ ಹಣ ಬರಬೇಕಿದೆ. ಸದ್ಯಕ್ಕೆ ರೂ 2.5 ಕೋಟಿ ಸಾಲವಾಗಿ ಕೊಟ್ಟರೆ, ಬ್ಯಾಂಕ್‌ನಿಂದ ಹಣ ಬಿಡುಗಡೆಯಾದ ತಕ್ಷಣ ರೂ.10 ಕೋಟಿ ಹಿಂತಿರುಗಿಸುತ್ತೇವೆ’ ಎಂದು ನಂಬಿಸಿದ್ದರು.

ನಕಲಿ ಬಾಬಾ ಹಾಗೂ ಮಧ್ಯವರ್ತಿಗಳ ಮಾತು ನಂಬಿದ ಕುಮುದಾ, ಚಾಮರಾಜಪೇಟೆಯಲ್ಲಿದ್ದ ತಮ್ಮ ಮನೆಯನ್ನು ರೂ.8.50 ಕೋಟಿಗೆ ಮಾರಾಟ ಮಾಡಿ, ಬಂದ ಹಣದಲ್ಲಿ ರೂ.2.50 ಕೋಟಿ ವಂಚಕರಿಗೆ ನೀಡಿದ್ದರು. ಹಣ ಪಡೆದ ಬಳಿಕ ಕೆಲ ಸಮಯ ಮಾತನಾಡುತ್ತಿದ್ದ ಅಪ್ಸರ್ ಪಾಷಾ, ತಿಂಗಳು ಕಳೆದರೂ ಸಬೂಬು ಹೇಳುತ್ತಿದ್ದ. ಜತೆಗೆ ಹಣ ವಾಪಸ್ ಕೇಳಿದರೆ ಕೊಲ್ಲುವ ಬೆದರಿಕೆ ಒಡ್ಡಿದ್ದ. ಹೀಗಾಗಿ ಮಹಿಳೆಯು ತಡವಾಗಿ ದೂರು ನೀಡಿದ್ದಾರೆ.

ಮೂವರು ಆರೋಪಿಗಳು ಸಂಚು ರೂಪಿಸಿ ಮಹಿಳೆಯನ್ನು ವಂಚಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Articles

Back to top button
error: Content is protected !!