ಜನಮನ

ಇನ್ಮುಂದೆ ಸಬ್ಸಿಡಿ ಸಹಿತ LPG ಸಿಲಿಂಡರ್ ಬುಕ್ ಮಾಡಲು ಆಧಾರ್ ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯ!

Views: 11

ಕನ್ನಡ ಕರಾವಳಿ ಸುದ್ದಿ: ಸಬ್ಸಿಡಿ ಸಹಿತ ಗೃಹ ಬಳಕೆಯ LPG ಸಿಲಿಂಡರ್ ಬುಕ್ ಮಾಡಲು ಆಧಾರ್ ಬಯೋಮೆಟ್ರಿಕ್ ದೃಢೀಕರಣ ಪೂರ್ಣಗೊಳಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಅಕ್ಟೋಬರ್ 1 ರಿಂದ ಇದು ಜಾರಿಗೆ ಬರಲಿದೆ.

ಅರ್ಹ ಕುಟುಂಬಗಳಿಗೆ ಮಾತ್ರ ಸಬ್ಸಿಡಿ ಸಹಿತ ಅಡುಗೆ ಅನಿಲ (LPG) ತಲುಪುವುದನ್ನು ಖಚಿತಪಡಿಸಿಕೊಳ್ಳಲು ಅಕ್ಟೋಬರ್ 1 ರಿಂದ ಸಬ್ಸಿಡಿ ದರದಲ್ಲಿ ಸಿಲಿಂಡರ್ ಬುಕ್ ಮಾಡಲು ಗ್ರಾಹಕರು ಕಡ್ಡಾಯವಾಗಿ ಆಧಾರ್ ಬಯೋಮೆಟ್ರಿಕ್ ದೃಢೀಕರಣ ಪೂರ್ಣಗೊಳಿಸಬೇಕು ಎಂದು ಸರ್ಕಾರ ಶನಿವಾರ ತಿಳಿಸಿದೆ.

ಈಗಾಗಲೇ ಆಧಾರ್ ಬಯೋಮೆಟ್ರಿಕ್ ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಿದ ಗ್ರಾಹಕರು ಯಾವುದೇ ಹೆಚ್ಚುವರಿ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ. ಸೆಪ್ಟೆಂಬರ್ 19 ರ ವೇಳೆಗೆ ಒಟ್ಟು ಸಕ್ರಿಯ ಗೃಹ ಬಳಕೆಯ ಎಲ್‌ಪಿಜಿ ಗ್ರಾಹಕರ ಪೈಕಿ ಶೇ.89.9 ರಷ್ಟು ಅಂದರೆ 27.43 ಕೋಟಿ ಗ್ರಾಹಕರು ಆಧಾರ್ ಬಯೋಮೆಟ್ರಿಕ್ ದೃಢೀಕರಣ ಪೂರ್ಣಗೊಳಿಸಿದ್ದಾರೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮಾಹಿತಿ ನೀಡಿದೆ.

ಈ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಸಬ್ಸಿಡಿ ಸಹಿತ ಗೃಹ ಬಳಕೆಯ ಸಿಲಿಂಡರ್ ಬುಕ್ ಮಾಡಲು ಆಗಲ್ಲ. ದೃಢೀಕರಣ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಸಬ್ಸಿಡಿ ಸಹಿತ ಸಿಲಿಂಡರ್ ಬುಕಿಂಗ್ ಸೌಲಭ್ಯ ಲಭ್ಯವಾಗಲಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಗೃಹ ಬಳಕೆಯೆ ಸಬ್ಸಿಡಿ ಸಿಲಿಂಡರ್‌ಗಳನ್ನು ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶಗಳಿಗೆ ಬಳಸುವುದನ್ನು ತಡೆಯುವುದು ಹಾಗೂ ನಕಲಿ ಮತ್ತು ಅನರ್ಹ ಸಂಪರ್ಕಗಳನ್ನು ರದ್ದುಪಡಿಸುವುದು ಈ ಕ್ರಮದ ಉದ್ದೇಶವಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಪ್ರಕ್ರಿಯೆ ಇಲ್ಲಿ ಪೂರ್ಣಗೊಳಿಸಿ: ಗ್ರಾಹಕರು ಎಲ್‌ಪಿಜಿ ವಿತರಣೆ ವೇಳೆ, ವಿತರಕರ ಕಚೇರಿ ಅಥವಾ ಸರ್ಕಾರಿ ಸ್ವಾಮ್ಯದ ಮೂರು ತೈಲ ಮಾರುಕಟ್ಟೆ ಕಂಪನಿಗಳ (OMCs) ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ (IndianOil ONE, Bharatga – HelloBPCL ಮತ್ತು HP Gas – HP PAY) ದೃಢೀಕರಣ ಪೂರ್ಣಗೊಳಿಸಬಹುದು.

ಬಯೋಮೆಟ್ರಿಕ್ ದೃಢೀಕರಣ ಪೂರ್ಣಗೊಳಿಸದಿದ್ದರೂ ಗ್ರಾಹಕರಿಗೆ ಎಲ್‌ಪಿಜಿ ಸಿಗುತ್ತದೆ. ಆದರೆ ಸಬ್ಸಿಡಿ ಸಹಿತ ಸಹಿತ ಸಿಲಿಂಡರ್ ಸಿಗುವುದಿಲ್ಲ ಎಂದು ಇಲಾಖೆ ತಿಳಿಸಿದೆ.

ಜೂನ್ 30 ರೊಳಗೆ ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು ಪೂರ್ಣಗೊಳಿಸುವಂತೆ ಈ ಮೊದಲು ಸರ್ಕಾರ ಸೂಚಿಸಿತ್ತು. ಆದರೆ ನಂತರ ಗಡುವನ್ನು ಹಲವಾರು ಬಾರಿ ಜುಲೈ 31, ಆಗಸ್ಟ್ 7, ಆಗಸ್ಟ್ 15, ಆಗಸ್ಟ್ 23, ಆಗಸ್ಟ್ 31, ಸೆಪ್ಟೆಂಬರ್ 7 ಮತ್ತು ಅಂತಿಮವಾಗಿ ಸೆಪ್ಟೆಂಬರ್ 14 ರವರೆಗೆ ವಿಸ್ತರಿಸಿತ್ತು. ದೇಶಾದ್ಯಂತ ಈ ದೃಢೀಕರಣ ಅಭಿಯಾನವು ಅಕ್ಟೋಬರ್ 2023 ರಿಂದ ನಡೆಯುತ್ತಿದೆ. ತೈಲ ಮಾರುಕಟ್ಟೆ ಕಂಪನಿಗಳು 12 ಕೋಟಿಗೂ ಹೆಚ್ಚು ಎಸ್‌ಎಂಎಸ್ (SMS) ಮತ್ತು ವಾಟ್ಸಾಪ್ ಸಂದೇಶಗಳನ್ನು ಗ್ರಾಹಕರಿಗೆ ಕಳುಹಿಸಿವೆ.

ಸೆಪ್ಟೆಂಬರ್ 2026ರಲ್ಲಿ 14.2 ಕೆಜಿ ಸಿಲಿಂಡರ್‌ಗೆ ಅನ್ವಯವಾಗುವ ಪರೋಕ್ಷ ಸಬ್ಸಿಡಿಯು ಸುಮಾರು 210 ರೂ.ಗಳಷ್ಟಿತ್ತು. ಇದು ಜೂನ್ ತಿಂಗಳಲ್ಲಿ 721 ರೂ.ಗಳಷ್ಟಿತ್ತು ಎಂದು ಸಚಿವಾಲಯ ಮಾಹಿತಿ ನೀಡಿದೆ.

2022-23ರಲ್ಲಿ ಗೃಹ ಬಳಕೆಯ ಎಲ್‌ಪಿಜಿ ಮಾರಾಟದಿಂದಾದ ನಷ್ಟವನ್ನು ಭರಿಸಲು ಸರ್ಕಾರವು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಿಗೆ (OMCs) 22,000 ಕೋಟಿ ರೂ. ಪಾವತಿಸಿದೆ. ಅಲ್ಲದೆ, 2025-26 ಮತ್ತು 2026-27ರ ಪ್ರತಿ ವರ್ಷವೂ ತಲಾ 30,000 ಕೋಟಿ ರೂ. ಪಾವತಿಸುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಆದರೂ ಸಹ ಆಗಸ್ಟ್ 31, 2026ರ ವೇಳೆಗೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಲ್ಲಿ ಗೃಹ ಬಳಕೆಯ ಎಲ್‌ಪಿಜಿಗೆ ಸಂಬಂಧಿಸಿ ಒಟ್ಟು ನಷ್ಟದ ಮೊತ್ತವು 62,000 ಕೋಟಿ ರೂ.ಗಳಿಂತ ಹೆಚ್ಚಿದೆ.

ಆನ್‌ಲೈನ್, ವಿತರಕರು ಅಥವಾ ವಿತರಣಾ ಸಿಬ್ಬಂದಿ ಮೂಲಕ ಲಭ್ಯವಿರುವ ಮಾರ್ಗಗಳನ್ನು ಬಳಸಿಕೊಂಡು ಅಕ್ಟೋಬರ್ 1ರೊಳಗೆ ದೃಢೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸರ್ಕಾರವು ಗ್ರಾಹಕರಿಗೆ ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ಎಲ್‌ಪಿಜಿ ಸೇವೆಗಳ ಸಹಾಯವಾಣಿ ಸಂಖ್ಯೆ 1800 2333 555 ಯನ್ನು ಸಂಪರ್ಕಿಸಬಹುದಾಗಿದೆ.

Related Articles

Back to top button
error: Content is protected !!