ಧಾರ್ಮಿಕ

ಕುಂದಾಪುರ: ಕೋಟೇಶ್ವರದಲ್ಲಿ ಧರ್ಮ ಝೆಂಕಾರ ಅಭಿಯಾನ ತಂಡದಿಂದ ಭಜನೆ

Views: 54

ಕನ್ನಡ ಕರಾವಳಿ ಸುದ್ದಿ: ಭಜನಾ ಸಂಸ್ಕೃತಿಯನ್ನು ಕಿರಿಯ ಜನಾಂಗಕ್ಕೂ ಪರಿಚಯಿಸುವ ನಿಟ್ಟಿನಲ್ಲಿ ಸೋದೆ ಶ್ರೀ ವಾದಿರಾಜ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥರ ವಿನೂತನ ಪರಿಕಲ್ಪನೆ ‘ಧರ್ಮ ಝೆಂಕಾರ’ ಅಭಿಯಾನದ ಅಂಗವಾಗಿ, ಭಜನಾ ತಂಡದ ಸದಸ್ಯೆಯರಲ್ಲೋರ್ವರಾದ ಕೋಟೇಶ್ವರದ ಅರುಂಧತಿ ವೈದ್ಯರ ನಿವಾಸದಲ್ಲಿ ಮಹಿಳಾ ತಂಡದವರು ಭಜನೆ ಮಾಡಿದರು. ಆರಂಭದಲ್ಲಿ ಚಂದ್ರಿಕಾ ಧನ್ಯ ತಂಡದವರಿಗೆ ಭಜನಾ ಪುಸ್ತಕಗಳು ಮತ್ತು ತಾಳವನ್ನು ಹಸ್ತಾಂತರಿಸಿದರು. ನಂತರ ಮಹಿಳೆಯರು ಹಯವದನಾಂಕಿತ ಕೀರ್ತನೆಗಳನ್ನು ಸುಶ್ರಾವ್ಯವಾಗಿ ಭಜನೆ ಮಾಡಿದರು. ಅರುಂಧತಿ ವೈದ್ಯ, ಚಂದ್ರಿಕಾ ಧನ್ಯ, ಸುಧಾ ಗೋಟ, ವಸಂತಿ ಮಿತ್ಯಂತ ಮತ್ತು ಸುಲೋಚನಾ ಅಡಿಗ ತಂಡದಲ್ಲಿದ್ದರು.

ಧರ್ಮ ಜಾಗೃತಿ ಹಾಗೂ ಭಾವೀ ಸಮೀರ ಶ್ರೀ ವಾದಿರಾಜರ ಮಹಿಮೆಗಳನ್ನು ಸಾರುವ ಮಹದುದ್ದೇಶದಿಂದ ಮುಂಬರುವ ಮಾರ್ಚಿ 23 ರಿಂದ 27 ರ ವರಗೆ ಶ್ರೀ ವಾದಿರಾಜರ ಅವತಾರ ಭೂಮಿ ಹೂವಿನಕೆರೆಯಲ್ಲಿ ಹಮ್ಮಿಕೊಳ್ಳಲಾದ ಭಾವೀ ಸಮೀರ ಶ್ರೀ ವಾದಿರಾಜ ವೈಭವೋತ್ಸವ ಕಾರ್ಯಕ್ರಮದ ಪೂರ್ವಭಾವಿಯಾಗಿ ವಿವಿಧ ಭಜನಾ ಮಂಡಳಿಗಳವರ ಸಹಯೋಗದಲ್ಲಿ ಈ ಧರ್ಮ ಝೆಂಕಾರ ಅಭಿಯಾನವನ್ನು ನಡೆಸಲಾಗುತ್ತಿದೆ.

ಈ ಮೂಲಕ ಪ್ರತಿ ಮನೆ, ಪ್ರತಿ ವ್ಯಕ್ತಿಗೂ ಭಜನೆಯ ಬಗ್ಗೆ ಆಸಕ್ತಿ ಮೂಡಿಸಲು ಭಜನಾ ಅಭಿಯಾನವನ್ನು ನಡೆಸಲಾಗುತ್ತಿದೆ. ಫೆ. 1 ರಿಂದ ಮಾ. 20 ರವರೆಗಿನ 48 ದಿನಗಳ ಒಂದು ಮಂಡಲ ಪರ್ಯಂತ ಎಲ್ಲಾ ಭಜನಾ ಮಂಡಳಿಯವರು ತಮ್ಮ ತಮ್ಮ ಗ್ರಾಮಗಳಲ್ಲಿ ದಿನಕ್ಕೆ ಒಂದು ಮನೆಯಂತೆ 48 ಮನೆಗಳಲ್ಲಿ ಭಜನಾ ಅಭಿಯಾನವನ್ನು ನಡೆಸಲಿದ್ದಾರೆ. ಪ್ರತಿ ಮನೆಗೂ ಒಂದು ಭಜನಾ ಪುಸ್ತಕ ಒಂದು ಜೊತೆ ತಾಳ ನೀಡಲಾಗುವುದು. ಈ ಅಭಿಯಾನದಿಂದ ಸುಮಾರು ಒಂದೂವರೆ ಸಾವಿರ ಮನೆಗಳಿಗೆ ಭಜನೆ ತಲುಪುತ್ತದೆ. ಇದರ ನಿರಂತರ ಮುಂದುವರಿಕೆಯಿಂದ ಈ ಅಭಿಯಾನ ವಿಸ್ತಾರಗೊಳ್ಳುತ್ತ ಸಾಗುವ ಸಾಧ್ಯತೆಯಿದೆ. ಧರ್ಮಜಾಗೃತಿಗಾಗಿ ಸಂಘಟಿತರಾಗಲು ಈ ಅಭಿಯಾನವನ್ನು ಪರಿಚಯಿಸಲಾಗುತ್ತಿದೆ.

Related Articles

Back to top button
error: Content is protected !!