ಮಂಗಳೂರಿನಲ್ಲಿ ಇಬ್ಬರು ವಿದ್ಯಾರ್ಥಿಗಳ ಮೇಲೆ ರ್‍ಯಾಗಿಂಗ್ ಆರೋಪ: ಆಸ್ಪತ್ರೆಯಲ್ಲಿ ಚಿಕಿತ್ಸೆ,ಸಮಗ್ರ ತನಿಖೆ
Views: 33
ಕನ್ನಡ ಕರಾವಳಿ ಸುದ್ದಿ: ಮಂಗಳೂರು ನಗರದ ಪದವಿ ಕಾಲೇಜೊಂದರ ಪ್ರಥಮ ವರ್ಷದ ಇಬ್ಬರು ವಿದ್ಯಾರ್ಥಿಗಳ ಮೇಲೆ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಹಲ್ಲೆ ನಡೆಸಿರುವ ಘಟನೆ ಮಂಗಳವಾರ ಮಂಗಳೂರಿನ ಗುಜ್ಜರಕೆರೆ ಬಳಿ ಸಂಭವಿಸಿದ್ದು, ಇದು ಮೇಲ್ನೋಟಕ್ಕೆ ರ‍್ಯಾಗಿಂಗ್ ಪ್ರಕರಣವೆಂದು ಪೊಲೀಸರು ಶಂಕಿಸಿದ್ದಾರೆ.
ಗುಜ್ಜರಕೆರೆಯ ಚಹಾ ಅಂಗಡಿಯೊಂದರ ಬಳಿ ಪ್ರಥಮ ವರ್ಷದ ಇಬ್ಬರು ವಿದ್ಯಾರ್ಥಿಗಳು ನಿಂತಿದ್ದಾಗ, ದ್ವಿತೀಯ ವರ್ಷದ 4 ರಿಂದ 6 ವಿದ್ಯಾರ್ಥಿಗಳ ಗುಂಪು ಅವರ ಮೇಲೆ ಏಕಾಏಕಿ ದಾಳಿ ನಡೆಸಿ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ವಿದ್ಯಾರ್ಥಿಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, “ಇದು ಮೇಲ್ನೋಟಕ್ಕೆ ರ‍್ಯಾಗಿಂಗ್ ಪ್ರಕರಣದಂತೆ ಕಂಡುಬರುತ್ತಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ವಿದ್ಯಾರ್ಥಿಗಳ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಮಂಗಳೂರು ನಗರ ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ, ಸಮಗ್ರ ತನಿಖೆ ನಡೆಸಲಾಗುವುದು. ತನಿಖೆಯ ನಂತರವಷ್ಟೇ ನೈಜ ಸತ್ಯಾಸತ್ಯತೆ ಹೊರಬರಲಿದೆ,” ಎಂದು ತಿಳಿಸಿದ್ದಾರೆ.






