ಯುವಜನ

ಉಡುಪಿ: ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದ ಯುವಕ ಕೊಲೆ ಬೆದರಿಕೆ ಹಾಕಿ14 ಲಕ್ಷ ರೂಪಾಯಿ ವಸೂಲಿ, ಯುವತಿ ದೂರು

Views: 66

ಕನ್ನಡ ಕರಾವಳಿ ಸುದ್ದಿ: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವಕನೊಬ್ಬ ಯುವತಿಗೆ ಜೀವ ಬೆದರಿಕೆ ಹಾಕಿ ಬರೋಬ್ಬರಿ 14 ಲಕ್ಷ ರೂಪಾಯಿ ವಸೂಲಿ ಮಾಡಿದ ಘಟನೆ ಉಡುಪಿಯಲ್ಲಿ ಬೆಳಕಿಗೆ ಬಂದಿದೆ.

ಈ ಸಂಬಂಧ ಕೆ.ಆ‌ರ್.ಪೇಟೆ ಮೂಲದ ಶರತ್ ಎಂಬಾತನ ವಿರುದ್ಧ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿಯ ಮಾರ್ಪಳ್ಳಿ ಬಲ್ಲಾಳ್ ನಗರದ ನಿವಾಸಿ ಮಹಿಮಾ (22) ಎಂಬುವವರಿಗೆ ಎರಡು ವರ್ಷಗಳ ಹಿಂದೆ ಇನ್‌ಸ್ಟಾಗ್ರಾಮ್ ಮೂಲಕ ಕೆ.ಆರ್.ಪೇಟೆಯ ಶರತ್ ಎಂಬಾತ ಪರಿಚಯವಾಗಿದ್ದ.ಈ ಪರಿಚಯ ಬೆಳೆಯುತ್ತಾ ಹೋದಂತೆ ಶರತ್‌ ತನ್ನಲ್ಲಿರುವ ನಾನಾ ಸಮಸ್ಯೆಗಳನ್ನು ಹೇಳಿಕೊಂಡು ಯುವತಿಯಿಂದ ಹಣ ಪಡೆಯಲಾರಂಭಿಸಿದ್ದ. ಮೊದಮೊದಲು 500, 1000 ಹಾಗೂ 2000 ರೂಪಾಯಿಗಳಂತೆ ಸಣ್ಣ ಮೊತ್ತದ ಹಣವನ್ನು ಪಡೆದಿದ್ದ.ಯುವತಿ ತಾನು ನೀಡಿದ ಹಣವನ್ನು ವಾಪಸ್‌ ಕೇಳಿದಾಗಲೆಲ್ಲಾ ಯಾವುದೋ ನೆಪ ಹೇಳಿ ಶರತ್ ತಪ್ಪಿಸಿಕೊಳ್ಳುತ್ತಿದ್ದ. ಆದರೆ, ಕಳೆದ ಫೆಬ್ರವರಿ ತಿಂಗಳಲ್ಲಿ ತನ್ನ ಅಸಲಿ ರೂಪ ತೋರಿಸಿದ ಆರೋಪಿ, ತಂದೆಗೆ ಹುಷಾರಿಲ್ಲ ಎಂಬ ಕಾರಣ ನೀಡಿ ಒಮ್ಮೆಲೆ 15 ಲಕ್ಷ ರೂಪಾಯಿ ನೀಡುವಂತೆ ಮಹಿಮಾಗೆ ಬೇಡಿಕೆಯಿಟ್ಟಿದ್ದ.

ಅಷ್ಟೊಂದು ದೊಡ್ಡ ಮೊತ್ತ ನೀಡಲು ಸಾಧ್ಯವಿಲ್ಲ ಎಂದು ಯುವತಿ ನಿರಾಕರಿಸಿದಾಗ, ಆರೋಪಿ ಶರತ್ ಫೋನ್‌ನಲ್ಲಿ ಅಸಭ್ಯವಾಗಿ ನಿಂದಿಸಿದ್ದಲ್ಲದೆ, “ಹಣ ಕೊಡದಿದ್ದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ” ಎಂದು ಕೊಲೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಆರೋಪಿಯ ಬೆದರಿಕೆಗೆ ಬೆದರಿದ ಯುವತಿ, ಅನಿವಾರ್ಯವಾಗಿ ಹಂತ ಹಂತವಾಗಿ ಒಟ್ಟು 14 ಲಕ್ಷ ರೂಪಾಯಿಯನ್ನು ಆತನಿಗೆ ನೀಡಿದ್ದಾಳೆ.

ತಾನು ಮೋಸ ಹೋಗಿರುವುದನ್ನು ಅರಿತ ಯುವತಿ ಈಗ ಉಡುಪಿ ನಗರ ಠಾಣೆಯ ಮೆಟ್ಟಿಲೇರಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related Articles

Back to top button
error: Content is protected !!