ಬೈಕಾಡಿ ಪದ್ಮಶಾಲಿ ಸಂಘಟನೆ: ವಾರ್ಷಿಕ ಮಹಾಸಭೆ -ಸತ್ಯನಾರಾಯಣ ಪೂಜೆ
Views: 30
ಕನ್ನಡ ಕರಾವಳಿ ಸುದ್ದಿ: ಬ್ರಹ್ಮಾವರದ ಬೈಕಾಡಿ ಪದ್ಮಶಾಲಿ ಸಂಘಟನೆ ಗಾಂಧಿನಗರ ಇದರ 13ನೇ ವಾರ್ಷಿಕ ಮಹಾಸಭೆ ಹಾಗೂ ಸತ್ಯನಾರಾಯಣ ಪೂಜೆ ಮಾರ್ಚ್ 15ರಂದು ಗಾಂಧಿನಗರದ ಶ್ರೀರಾಮ ಮಿತ್ರಕೂಟ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.
ಬೆಳಿಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಬೈಕಾಡಿ ಶ್ರೀ ಭಾಸ್ಕರ್ ಶೆಟ್ಟಿಗಾರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಾಲಿಕೇರಿ ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಸುರೇಶ್ ಶೆಟ್ಟಿಗಾರ್ ಮಾತನಾಡಿ, ಸಮಾಜಮುಖಿ ಸೇವಾ ಕೈಂಕರ್ಯದಿಂದ ಸಂಘ ಇನ್ನಷ್ಟು ಪ್ರಗತಿ ಕಾಣಲಿ ಎಂದರು.
ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬಾರ್ಕೂರು ರಂಗನಕೇರಿ ಶ್ರೀನಿವಾಸ್ ಶೆಟ್ಟಿಗಾರ್ ಮಾತನಾಡಿ, ನಾವೆಲ್ಲರೂ ಒಂದಾಗಿ ಸಮಾಜದ ಕಷ್ಟ- ಸುಖಗಳಿಗೆ ಸ್ಪಂಧಿಸಿ, ಸಮಾಜದ ಸರ್ವತೋಮುಖ ಅಭಿವೃದ್ಧಿಯಾಗಿ ತಮ್ಮ ಪ್ರಯತ್ನ ಹೀಗೆಯೇ ಮುಂದುವರೆಯಲಿ ಎಂದರು.
ಬಸ್ರೂರು ವಲಯ ಪದ್ಮಶಾಲಿ ಕ್ರಿಯಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ರಾಜೇಂದ್ರ ಶೆಟ್ಟಿಗಾರ ಬಸ್ರೂರು ಮಾತನಾಡಿ, ತನ್ನ ಏಳಿಗೆಯೊಂದಿಗೆ ಎಲ್ಲರ ಏಳಿಗೆ ಸಾಧಿಸಿದಾಗ ಸಮಾಜದ ಅಭಿವೃದ್ಧಿ ಇನ್ನಷ್ಟು ಸಾಧ್ಯ ಎಂದರು.
ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ(ರಿ) ಪ್ರಧಾನ ಕಾರ್ಯದರ್ಶಿ ವೆಂಕಟರಾಯ ಶೆಟ್ಟಿಗಾರ್, ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ) ಉಪಾಧ್ಯಕ್ಷರಾದ ರತ್ನಾಕರ ಇಂದ್ರಾಳಿ, ಸಂಘದ ಗೌರವಾಧ್ಯಕ್ಷ ಲಕ್ಷ್ಮಣ ಶೆಟ್ಟಿಗಾರ್ ಬೈಕಾಡಿ, ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯಪಾಲರಿಂದ ಪ್ರಶಸ್ತಿ ಪುರಸ್ಕೃತ ನವ್ಯಶ್ರೀ ಶೆಟ್ಟಿಗಾರ್, ಅಂತರಾಷ್ಟ್ರೀಯ ಮ್ಯಾರಥಾನ್ ಓಟಗಾರ ಸಾಸ್ತಾನದ ಗುಂಡ್ಮಿ ವಿಠಲ ಶೆಟ್ಟಿಗಾರ್ ಇವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ, ಅಶಕ್ತರಿಗೆ, ವಿದ್ಯಾ ನಿಧಿಯಿಂದ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಶ್ರೀ ರಾಘವೇಂದ್ರ ಪ್ರಾರ್ಥಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರೇವತಿ, ಶುಭಕರ್, ರಾಘವೇಂದ್ರ, ಸುನಿಲ್ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ವಂದಿಸಿದರು.
ನಂತರ ರಾಘವೇಂದ್ರ, ಪೂರ್ವಿಕ, ಶುಭಕರ್ ಇವರಿಂದ ‘ಗಾನ ವೈಭವ’ ನಡೆಯಿತು.








