ಕುಂದಾಪುರ: ಮೊಳಹಳ್ಳಿಯಲ್ಲಿ 30 ಲಕ್ಷರೂ. ಮೌಲ್ಯದ ಚಿನ್ನಾಭರಣ ಕಳವು, ಸ್ನೇಹಿತನಿಂದಲೇ ಕಳ್ಳತನ ಆರೋಪ
Views: 81
ಕನ್ನಡ ಕರಾವಳಿ ಸುದ್ದಿ:ಮೊಳಹಳ್ಳಿ ಗ್ರಾಮದ ಮಾವಿನಕಟ್ಟೆ ಕೈಲ್‌ಕೇರಿಯಲ್ಲಿ ಸುಮಾರು 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಆಗಿರುವ ಘಟನೆ ನಡೆದಿದೆ.
ಮೊಳಹಳ್ಳಿ ಗ್ರಾಮದ ನಿವಾಸಿ ಭಾರತಿ ಅವರು ಜೂ.1ರಂದು ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದು ವಾಪಸಾದ ಬಳಿಕ ಚಿನ್ನಾಭರಣಗಳನ್ನು ಗೋಡ್ರೇಜ್ ನಲ್ಲಿ ಇಟ್ಟಿದ್ದರು. ಜು.27ರಂದು ಗೋಡ್ರೇಜ್ ಬೀಗ ತೆಗೆದು ಆಭರಣಗಳನ್ನು ಪರಿಶೀಲಿಸಿದಾಗ ಅವು ಇಟ್ಟಿದ್ದ ಸ್ಥಳದಲ್ಲಿ ಕಾಣಿಸಿರಲಿಲ್ಲ.
ಈ ಬಗ್ಗೆ ಮನೆಯವರ ಬಳಿ ವಿಚಾರಿಚಾರಿಸಿದ್ದು ಯಾರಿಗೂ ಕೂಡ ಮಾಹಿತಿ ಇರಲಿಲ್ಲ. ಅನಂತರ ಮನೆಯಲ್ಲೆಲ್ಲ ಹುಡುಕಾಡಿದರೂ ಚಿನ್ನಾಭರಣಗಳು ಪತ್ತೆಯಾಗಿಲ್ಲ.
ಏಳು ಚಿನ್ನದ ಬಳೆಗಳು, ಏಳು ಉಂಗುರಗಳು, ಏಳು ಜತೆ ಕಿವಿಯೋಲೆ, ಒಂದು ಜತೆ ಜುಮಕಿ, ಮೂರು ಬ್ರಾಸ್ಲೈಟ್, ಒಂದು ಕರಿಮಣಿ ಸರ, ಒಂದು ನೆಕ್ಲೇಸ್, ಒಂದು ಮುತ್ತಿನ ಸರ, ಒಂದು ಕೆಂಪು ಹರಳಿನ ಸರ ಹಾಗೂ ಎರಡು ಚಿನ್ನದ ಚೈನ್ ಗಳು ಸೇರಿದಂತೆ ಒಟ್ಟು ಸುಮಾರು 320 ಗ್ರಾಂ ಚಿನ್ನಾಭರಣ ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸ್ನೇಹಿತನಿಂದಲೇ ಕಳ್ಳತನ ಆರೋಪ
ಭಾರತಿ ಅವರ ಪತಿ ರವಿ ಕೊಠಾರಿ ಅವರ ಸ್ನೇಹಿತನೋರ್ವ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ ಹಾಗೂ ಕುಟುಂಬದೊಂದಿಗೆ ಉತ್ತಮ ಪರಿಚಯ ಹೊಂದಿದ್ದ ಮನೆಯಲ್ಲಿ ಚಿನ್ನಾಭರಣಗಳಿರುವ ಬಗ್ಗೆ ಆತನಿಗೆ ಸ್ಪಷ್ಟ ಮಾಹಿತಿ ಮೊದಲಿನಿಂದಲೂ ಇತ್ತು. ಹೀಗಾಗಿ ಮನೆಯವರು ಇಲ್ಲದ ಸಮಯದಲ್ಲಿ ಚಿನ್ನಾಭರಣಗಳ ಬಗ್ಗೆ ತಿಳಿದಿದ್ದ ಆತನೇ ಅವುಗಳನ್ನು ಕಳವು ಮಾಡಿಕೊಂಡು ಹೋಗಿರಬಹುದು. ಆದ್ದರಿಂದ ಆತನನ್ನು ವಿಚಾರಣೆಗೊಳಪಡಿಸಿ ಪರಿಶೀಲನೆ ನಡೆಸಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮನೆಗೆ ಭೇಟಿ ನೀಡಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ.






