ಸಾಮಾಜಿಕ

ಒಬ್ಬನನ್ನೇ ವಿವಾಹವಾದ ಮೂವರು ಸಹೋದರಿಯರು!

Views: 105

ಕನ್ನಡ ಕರಾವಳಿ ಸುದ್ದಿ: ಸಹೋದರಿಯರ ಅತಿಯಾದ ಅನುಬಂಧಕ್ಕೆ ಸಾಕ್ಷಿಯಾಗುವಂತಹ ವಿಚಿತ್ರ ಹಾಗೂ ಅಚ್ಚರಿಯ ಘಟನೆಯೊಂದು ನಡೆದಿದೆ. ಕ್ಷಣಕಾಲವೂ ಪರಸ್ಪರ ಅಗಲಿರಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಮೂವರು ಸೋದರಿಯರು ಒಂದೇ ಯುವಕನನ್ನು ವಿವಾಹವಾಗುವ ಮೂಲಕ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದಾರೆ.

ಉತ್ತರ ಪ್ರದೇಶದ ಅದ್ರೋಹಾ ಜಿಲ್ಲೆಯ ದೌರಿಯಾ ಗ್ರಾಮದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸೋದರಿಯರಾದ ಸರೋಜಾ (20), ಸಾವಿತ್ರಿ (19) ಹಾಗೂ ಸಂತೋಷ (18) ಈ ವಿಭಿನ್ನ ನಿರ್ಧಾರ ಕೈಗೊಂಡವರು. ತಮ್ಮ ವಿಡಿಯೋಗಳನ್ನು ರೆಕಾರ್ಡ್ ಮಾಡುತ್ತಿದ್ದ ಕ್ಯಾಮೆರಾಮನ್ ವಿಕಾಸ್ (20) ಎಂಬಾತನನ್ನೇ ಈ ಸಹೋದರಿಯರು ವರಿಸಿದ್ದಾರೆ. ಕೆಲ ವಿಡಿಯೋಗಳಲ್ಲಿ ಈ ಯುವತಿಯರ ಪತಿಯ ಪಾತ್ರದಲ್ಲೂ ವಿಕಾಸ್‌ ಅಭಿನಯಿಸುತ್ತಿದ್ದು, ಈಗ ನಿಜ ಜೀವನದಲ್ಲೂ ಮೂವರಿಗೂ ಪತಿಯಾಗಿದ್ದಾನೆ.

ಚಿಕ್ಕಂದಿನಿಂದಲೂ ಜತೆಯಾಗಿಯೇ ಬೆಳೆದ ನಮಗೆ ಮದುವೆಯ ನಂತರ ಪರಸ್ಪರ ಅಗಲಬೇಕಾಗುತ್ತದೆ ಎಂಬ ಭಯ ಕಾಡತೊಡಗಿತ್ತು. ಒಂದು ಹಂತದಲ್ಲಿ ಈ ವಿರಹದ ಭಯಕ್ಕೆ ಜೀವ ಕಳೆದುಕೊಳ್ಳುವ ಆಲೋಚನೆಯೂ ಬಂದಿತ್ತು ಎಂದು ಹಿರಿಯ ಸಹೋದರಿ ಸರೋಜಾ ಹೇಳಿಕೊಂಡಿದ್ದಾಳೆ. ಅಂತಿಮವಾಗಿ ಪ್ರತ್ಯೇಕವಾಗುವುದಕ್ಕಿಂತ ಒಬ್ಬನೇ ವ್ಯಕ್ತಿಯನ್ನು ಮದುವೆಯಾಗುವುದು ಸೂಕ್ತ ಎಂದು ನಿರ್ಧರಿಸಿ, ತಮಗೆ ಸೂಕ್ತ ಎನಿಸಿದ ಹಾಗೂ ತಮ್ಮ ಅನುಬಂಧವನ್ನು ಅರ್ಥಮಾಡಿಕೊಂಡ ವಿಕಾಸ್‌ನನ್ನು ವರಿಸಲು ನಿರ್ಧರಿಸಿದ್ದಾಗಿ ಆಕೆ ತಿಳಿಸಿದ್ದಾಳೆ.

ಸ್ಥಳೀಯ ಚಾಮುಂಡಾ ಮಾತಾ ದೇವಾಲಯದಲ್ಲಿ ಸರಳವಾಗಿ ಈ ಮದುವೆ ನಡೆದಿದ್ದು, ಪ್ರಸ್ತುತ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆದರೆ, ಈ ವಿವಾಹ ಮಹೋತ್ಸವದಲ್ಲಿ ಯುವಕನಾಗಲಿ ಅಥವಾ ಯುವತಿಯರ ಕುಟುಂಬಸ್ಥರಾಗಲಿ ಮತ್ತು ಸಂಬಂಧಿಕರಾಗಲಿ ಭಾಗವಹಿಸಿರಲಿಲ್ಲ. ನಾವು ವಯಸ್ಕರಾಗಿದ್ದು ನಮ್ಮ ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಪೂರ್ಣ ಹಕ್ಕು ನಮಗಿದೆ ಎಂದು ಯುವತಿಯರು ಪ್ರತಿಪಾದಿಸಿದ್ದಾರೆ.

ಸಹೋದರಿಯರ ಅಪಾರ ಪ್ರೀತಿ ಮತ್ತು ಅನುಬಂಧವನ್ನು ಹತ್ತಿರದಿಂದ ಕಂಡಿದ್ದರಿಂದಲೇ ತಾನು ಈ ಮದುವೆಗೆ ಒಪ್ಪಿಗೆ ನೀಡಿದೆ ಎಂದು ವಿಕಾಸ್ ಹೇಳಿಕೊಂಡಿದ್ದಾನೆ. ಆದರೆ, ಕುಟುಂಬದವರ ಗೈರುಹಾಜರಿಯಲ್ಲಿ ದೇವಾಲಯದಲ್ಲಿ ಮದುವೆ ನಡೆಯಿತು.

 

Related Articles

Back to top button
error: Content is protected !!