ಸಾಮಾಜಿಕ

ಕೋಟೇಶ್ವರ ವಲಯ ಪದ್ಮಶಾಲಿ ಸಮಾಜ ಸಂಘ 40ನೇ ವಾರ್ಷಿಕ ಮಹಾಸಭೆ

Views: 26

ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರ ವಲಯ ಪದ್ಮಶಾಲಿ ಸಮಾಜ ಸಂಘದ 40ನೇ ವಾರ್ಷಿಕ ಮಹಾಸಭೆ ಹಾಗೂ 20ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಇತ್ತೀಚೆಗೆ ಕೋಟೇಶ್ವರದ ಶ್ರೀ ಕಮಲಮ್ಮ ಸರ್ವೋತ್ತಮ ಬುಧ್ಯ ಕಲ್ಯಾಣ ಮಂಟಪದಲ್ಲಿ ಸಂಘದ ಅಧ್ಯಕ್ಷರಾದ ಡಾ.ಚಂದ್ರಶೇಖರ್ ವಿ.ಎಸ್.ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭಾ ಕಾರ್ಯಕ್ರಮವನ್ನು ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ ಮಂಗಳೂರು ಇದರ ಕಾರ್ಯದರ್ಶಿ ಡಾ. ವೆಂಕಟ್ರಾಯ ಶೆಟ್ಟಿಗಾರ್ ಉದ್ಘಾಟಿಸಿ, ಕೋಟೇಶ್ವರ ವಲಯ ಪದ್ಮಶಾಲಿ ಸಮಾಜ ಸಂಘವು 40 ಸಂವತ್ಸರವನ್ನು ಪೂರೈಸಿ ಕಿರಿಯರಿಗೆ ಮಾರ್ಗದರ್ಶನ ನೀಡುತ್ತಾ ಸಮಾಜವನ್ನು ಒಗ್ಗಟ್ಟಿನಲ್ಲಿ ಕರೆದುಕೊಂಡು ಹೋಗುತ್ತಿರುವುದು ಹೆಮ್ಮೆಯ ಸಂಗತಿ. ಈ ಸಂಘಟನೆಯಲ್ಲಿ ಪದ್ಮಶಾಲಿ ಸಮಾಜದ ಯುವಕರು ಹೆಚ್ಚು ತೊಡಗಿಸಿಕೊಂಡು ಇನ್ನಷ್ಟು ಸಂಘವನ್ನು ಬಲಿಷ್ಠಗೊಳಿಸುವುದರೊಂದಿಗೆ ಸಮಾಜಮುಖಿ ಕೆಲಸ ಮಾಡಬೇಕು ಎಂದರು.

ಪದ್ಮಶಾಲಿ ಸಮಾಜ ಸಂಘ ಕೋಟೇಶ್ವರದ ಕಟ್ಟಡ ಸಮಿತಿ ಅಧ್ಯಕ್ಷರಾದ ಡಾ. ಬಸವರಾಜ್ ಶೆಟ್ಟಿಗಾರ್ ಮಾತನಾಡುತ್ತಾ – ಕೋಟೇಶ್ವರ ವಲಯ ಪದ್ಮಶಾಲಿ ಸಮಾಜ ಸಂಘದ ಹೆಮ್ಮೆಯ ದೊಡ್ಡ ಕನಸಾದ ಸ್ವಂತ ಕಟ್ಟಡ ನಿರ್ಮಾಣದ ಹಂತದಲ್ಲಿದ್ದು, ಈ ಕೆಲಸಕ್ಕೆ ಸಮಾಜದ ಸಮಸ್ತರು ಕೈ ಜೋಡಿಸಿ ಸಹಕರಿಸಬೇಕು. ಮುಂದಿನ ಒಂದು ವರ್ಷದೊಳಗೆ ಈ ಕಟ್ಟಡವನ್ನು ಲೋಕಾರ್ಪಣೆಗೊಳಿಸುವ ಗುರಿ ನಮ್ಮದಾಗಿದೆ ಎಂದು ಶುಭಹಾರೈಸಿದರು.

ಸಮಾರಂಭದ ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ ಮಂಗಳೂರು ಇದರ ಉಪಾಧ್ಯಕ್ಷರಾದ ರತ್ನಾಕರ ಇಂದ್ರಾಳಿ, ವಿಜಯ ಕರ್ನಾಟಕ ರೆಸ್ಪಾನ್ಸ್ ಹೆಡ್ ರವಿ.ಎಸ್.ಶೆಟ್ಟಿಗಾರ್, ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಮಾಲತಿ ಶೆಟ್ಟಿಗಾರ್, ಪದ್ಮಶಾಲಿ ಸಮಾಜ ಸಂಘ ಕೋಟೇಶ್ವರ ಮಹಿಳಾ ಸಂಚಾಲಕಿ ರಾಜೀವಿ ಶೆಟ್ಟಿಗಾ‌ರ್ ಉಪಸ್ಥಿತರಿದ್ದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಕರಾಟೆಪಟು, ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದಲ್ಲಿ ವಿಜೇತರಾದ ಕಾರ್ತಿಕ್ ಶೆಟ್ಟಿಗಾರ್, ಬೈಂದೂರು ಠಾಣಾ ಎಎಸ್‌ಐ ಸೀತಾರಾಮ ಶೆಟ್ಟಿಗಾರ್ ಹಾಗೂ ಕೋಟೇಶ್ವರ ವಲಯದ 5 ಹಿರಿಯ ಸಮಾಜ ಬಾಂಧವರನ್ನು ಸನ್ಮಾನಿಸಲಾಯಿತು. ಸಮಾಜದ ಸಾಧಕ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿ ವೇತನವನ್ನು ನೀಡಲಾಯಿತು. ಹಾಗೂ ಜಿಲ್ಲೆಯ ನಾನಾ ವಲಯಗಳ ಪದಾಧಿಕಾರಿಗಳನ್ನು, ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಹೆಚ್ಚಿನ ಶ್ರಮ ವಹಿಸುತ್ತಿರುವ ವೆಂಕಟೇಶ್ ಶೆಟ್ಟಿಗಾರ್, ಪ್ರಮೋದ್ ಶೆಟ್ಟಿಗಾರ್‌ರವರನ್ನು ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಲೇಖಕ ಕಾಳಾವರ ಗಣಪಯ್ಯ ಶೆಟ್ಟಿಗಾರ್ ವಿರಚಿತ ‘ಪುರಾಣ ಲೋಕದ ಶಾಪಗಳು’ ಕೃತಿ ಬಿಡುಗಡೆಗೊಳಿಸಲಾಯಿತು.

ಸಂಘದ ಗೌರವಾಧ್ಯಕ್ಷರಾದ ಜನಾರ್ಧನ್ ಶೆಟ್ಟಿಗಾರ್ ಪ್ರಸ್ತಾವನಗೈದರೆ, ಪ್ರಧಾನ ಕಾರ್ಯದರ್ಶಿ ಪ್ರಮೋದ್ ಶೆಟ್ಟಿಗಾರ್ ವರದಿ ವಾಚಿಸಿದರು. ರಾಜೀವಿ, ಸುಗುಣ, ಗೀತಾ ಪ್ರಾರ್ಥಿಸಿದರು. ಇಂದಿರಾ ಜಿ. ಲೆಕ್ಕಪತ್ರ ಮಂಡಿಸಿದರು. ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪದವಿ ಪೂರ್ವ ಕಾಲೇಜಿನ ಸಂಖ್ಯಾಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರಭಾಕರ ಶೆಟ್ಟಿಗಾರ್ ವಕ್ವಾಡಿಯವರು ನೂತನ ಪದಾಧಿಕಾರಿಗಳ ಆಯ್ಕೆಯ ಪಟ್ಟಿಯನ್ನು ವಾಚಿಸಿದರು. ಇಂಜಿನೀಯರ್ ಸುರೇಶ್ ಶೆಟ್ಟಿಗಾರ್ ಸ್ವಾಗತಿಸಿದರು. ವೆಂಕಟೇಶ್ ಶೆಟ್ಟಿಗಾರ್ ವಂದಿಸಿದರು. ಉಷಾ ರವೀಂದ್ರ ಶೆಟ್ಟಿಗಾರ್ ಹಾಗೂ ರಕ್ಷಿತಾ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು. ನಂತರ ಸಮಾಜದ ಪ್ರತಿಭಾನ್ವಿತರಿಂದ ಮನರಂಜನಾ ಕಾರ್ಯಕ್ರಮ ಜರಗಿತು.

Related Articles

Back to top button
error: Content is protected !!