ಗಂಡ-ಹೆಂಡತಿ ಜಗಳ: ಅತ್ತೆ-ಮಾವ ಪತ್ನಿ ಗಂಭೀರ ಹಲ್ಲೆಗೊಳಗಾದ ಸಾಫ್ಟ್‌ವೇರ್ ಎಂಜಿನಿಯರ್ ಸಾವು
Views: 47
ಕನ್ನಡ ಕರಾವಳಿ ಸುದ್ದಿ: ಮಗುವಿಗೆ ಔಷಧಿ ನೀಡುವ ವಿಚಾರದಲ್ಲಿ ಗಂಡ-ಹೆಂಡತಿ ನಡುವೆ ನಡೆದ ಜಗಳಕ್ಕೆ ಪತ್ನಿ ಕುಟುಂಬಸ್ಥರಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಟೆಕ್ಕಿ ಸಾವನ್ನಪಿರುವ ಘಟನೆ ನಡೆದಿದೆ.
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಈ ಘಟನೆ ನಡೆದಿದೆ. 31 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ವಿನಯ್ ಗುಪ್ತಾ ಮೃತ ಟೆಕ್ಕಿ. ಅತ್ತೆ-ಮಾವ ಪತ್ನಿ ಕುಟುಂಬದವರೇ ಥಳಿಸಿದ್ದು, ಗಂಭೀರ ಹಲ್ಲೆಗೊಳಗಾದ ಟೆಕ್ಕಿ ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ವಿನಯ್ ನೋಯ್ಡಾ ಮೂಲದ ಸಾಫ್ಟ್‌ವೇರ್ ಕಂಪನಿಯಾದ ಅಡೋಬ್‌ನಲ್ಲಿ ಕೆಲಸ ಮಾಡುತ್ತಿದ್ದರು. ವಾರ್ಷಿಕ ಸುಮಾರು 60 ಲಕ್ಷ ರೂ. ಪ್ಯಾಕೇಜ್ ಹೊಂದಿದ್ದರು. ಅವರು ಸುಮಾರು ಮೂರುವರೆ ವರ್ಷಗಳ ಹಿಂದೆ ರೇಖಾ ಅವರನ್ನು ವಿವಾಹವಾದರು. ದಂಪತಿಗೆ ಒಂದು ಗಂಡು ಮತ್ತು ಒಂದು ಹೆಣ್ಣುಮಕ್ಕಳಿದ್ದರು.
ವಿನಯ್ ಗುಪ್ತಾ ಮತ್ತು ಅವರ ಪತ್ನಿ ರೇಖಾ ನಡುವೆ ಮಗುವಿಗೆ ಔಷಧಿ ನೀಡುವ ವಿಚಾರವಾಗಿ ವಾಗ್ವಾದ ನಡೆದು ಗಲಾಟೆ ವಿಕೋಪಕ್ಕೆ ತಿರುಗಿದೆ. ಈ ಸಮಯದಲ್ಲಿ, ರೇಖಾ ತನ್ನ ಕುಟುಂಬ ಸದಸ್ಯರನ್ನು ಸಂಪರ್ಕಿಸಿ ಮನೆ ಬಿಟ್ಟು ಹೋಗಿದ್ದಳು. ಬಳಿಕ ರೇಖಾ ತನ್ನ ಇಬ್ಬರು ಸಹೋದರರು, ಅತ್ತಿಗೆ, ತಂದೆ, ಚಿಕ್ಕಪ್ಪ ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ವಾಪಸ್ ಆದರು. ಕುಟುಂಬಸ್ಥರನ್ನು ಕರೆತಂದು ಪತಿ ಮೇಲೆ ಹಲ್ಲೆ ನಡೆಸಿದ್ದಾರೆ.
ಮನೆಗೆ ಬಂದ ಅತಿಥಿಗಳಿಗೆ ವಿನಯ್ ತಾಯಿ ಪಾನೀಯ ತರಲು ಅಡುಗೆ ಕೋಣೆಗೆ ಹೋಗಿದ್ದರು. ಈ ವೇಳೆ ಪತ್ನಿ ಕುಟುಂಬಸ್ಥರು ಸೇರಿಕೊಂಡು ಟೆಕ್ಕಿ ಮೇಲೆ ಹಲ್ಲೆ ನಡೆಸಿದ್ದಾರೆ. ಟೆಕ್ಕಿ ತಾಯಿ ಬೇಡಿಕೊಂಡರೂ ಬಿಡದೇ ಹೊಡೆದಿದ್ದಾರೆ. ವಿನಯ್‌ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ವಿನಯ್ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.






