ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳಿದ ಸಿದ್ದರಾಮಯ್ಯ
Views: 8
ಕನ್ನಡ ಕರಾವಳಿ ಸುದ್ದಿ: ಚುನಾವಣಾ ವ್ಯವಸ್ಥೆ ಸರಿ ಇಲ್ಲದಿರುವ ಕಾರಣ ಇನ್ನು ಮುಂದೆ ನಾನು ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿರಿಯ ರಾಜಕಾರಣಿ ವಿ.ಎಸ್.ವೀರಣ್ಣ ಅವರ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಯಸ್ಸಾಗಿದೆ ಎಂಬ ಕಾರಣಕ್ಕಲ್ಲ, ಬದಲಾಗಿ ಇಂದಿನ ಚುನಾವಣಾ ವ್ಯವಸ್ಥೆ ಹಾಗೂ ಹಣದ ಹೊಳೆ ಹರಿಯುತ್ತಿರುವ ಬಗೆಯಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ ಎಂದರು.
ಚುನಾವಣಾ ರಾಜಕೀಯಕ್ಕೆ ಗುಡ್ ಬೈ: ಇನ್ನು ಮುಂದೆ ಲೋಕಸಭೆಗೂ ನಿಲ್ಲುವುದಿಲ್ಲ, ವಿಧಾನಸಭೆಗೂ ನಿಲ್ಲುವುದಿಲ್ಲ. ಆದರೆ ರಾಜಕಾರಣದಲ್ಲಿ ಮಾತ್ರ ಸಕ್ರಿಯವಾಗಿ ಇದ್ದು, ಜನರ ಕಷ್ಟ, ಸುಖಗಳಿಗೆ ಧ್ವನಿಯಾಗಿ ನಿಲ್ಲುತ್ತೇನೆ ಎಂದರು.
ನನಗೆ ಸಂಸತ್‌ಗೆ ಹೋಗುವಂತೆ ಆಫರ್ ಬಂದಿತ್ತು, ಆದರೆ ನಾನು ಅದನ್ನು ತಿರಸ್ಕರಿಸಿದೆ. 1991ರಲ್ಲೇ ಕೊಪ್ಪಳದಿಂದ ಲೋಕಸಭೆಗೆ ಸ್ಪರ್ಧಿಸಿ ಸೋತಾಗಲೆ ಇನ್ನು ಲೋಕಸಭೆಗೆ ನಿಲ್ಲುವುದಿಲ್ಲ ಎಂದು ತೀರ್ಮಾನಿಸಿದ್ದೆ ಎಂದರು.






