ಜನಮನ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಮತ್ತೆ ಮಳೆ ಚುರುಕು!

Views: 11

ಕನ್ನಡ ಕರಾವಳಿ ಸುದ್ದಿ:ಬಾಂಗ್ಲಾದೇಶ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ತಿರುವಿನ ಪರಿಣಾಮ ಕರ್ನಾಟಕದ ಹಲವು ಜಿಲ್ಲೆಗಳ ಮೇಲೆ ಬೀಳಲಿದ್ದು ಇದರಿಂದಾಗಿ ಅಲ್ಲಲ್ಲಿ ಮಳೆ ಹಾಗು ಮೋಡಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಮುನ್ಸೂಚನೆ ನೀಡಿದೆ.

ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಮುಂದಿನ ಎರಡು-ಮೂರು ದಿನ ಸಾಮಾನ್ಯ ಮಳೆಯಾದರೆ ಮಲೆನಾಡಿನ ಉಳಿದ ಭಾಗಗಳಲ್ಲಿ ಮೋಡ ಕವಿದ ವಾತಾವರಣದ ಜೊತೆಗೆ ಸಾಧಾರಣ ಮಳೆಯಾಗಲಿದೆ.

ಉಡುಪಿ ಹಾಗೂ ಉತ್ತರ ಕನ್ನಡದ ಕರಾವಳಿ ಭಾಗಗಳಲ್ಲಿ ಮಳೆ ಬರಲಿದ್ದು, ದಕ್ಷಿಣ ಕನ್ನಡದ ಕಾರ್ಕಳ ಸೇರಿದಂತೆ ಘಟ್ಟದ ಕೆಳಭಾಗದಲ್ಲೂ ಮಳೆಯ ಆರ್ಭಟ ಜೋರಾಗುವ ನಿರೀಕ್ಷೆಯಿದೆ. ಕರಾವಳಿ ಭಾಗದಲ್ಲಿ ಸೆಪ್ಟೆಂಬರ್ 3ರವರೆಗೂ ಇದೇ ರೀತಿಯ ಹವಾಮಾನ ಮುಂದುವರಿಯುವ ಸಾಧ್ಯತೆಯಿದೆ.

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಸೆಪ್ಟೆಂಬರ್ 2ರಿಂದ ದಕ್ಷಿಣ ಒಳನಾಡಿನಲ್ಲೂ ಮಳೆ ಮತ್ತೆ ಅಬ್ಬರಿಸುವ ಲಕ್ಷಣಗಳು ಕಂಡುಬರುತ್ತಿವೆ.

ಒಟ್ಟಾರೆ ಬಂಗಾಳ ಕೊಲ್ಲಿಯಲ್ಲಿನ ಹವಾಮಾನ ಬದಲಾವಣೆಯೇ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ ಮುಂದುವರಿಯುವುದಕ್ಕೆ ಕಾರಣ ಎಂದರೂ ತಪ್ಪಾಗಲಾರದು. ವಿಶೇಷವಾಗಿ ಸೆಪ್ಟೆಂಬರ್ 2 ಮತ್ತು 3ರಂದು ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ.

Related Articles

Back to top button
error: Content is protected !!