ಹೋಟೆಲ್‌ಗಳಲ್ಲಿ ಆಹಾರದ ಗುಣಮಟ್ಟ, ಸ್ವಚ್ಛತೆಗೆ ಖಡಕ್ ವಾರ್ನಿಂಗ್, ಹೊಸ ನಿಯಮವೇನು?
Views: 7
ಕನ್ನಡ ಕರಾವಳಿ ಸುದ್ದಿ : ಹೋಟೆಲ್‌ಗಳಲ್ಲಿ ಆಹಾರದ ಗುಣಮಟ್ಟ, ಸ್ವಚ್ಛತೆಗೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಯು.ಟಿ ಖಾದರ್ ಮಹತ್ವದ ಸಭೆ ನಡೆಸಿದ್ದಾರೆ.
ಹೋಟೆಲ್ ಮಾಲೀಕರಿಗೆ ಖಡಕ್ ಸೂಚನೆ ಕೊಟ್ಟಿರುವ ಸಚಿವರು, ಮತ್ತೊಂದೆಡೆ ರಾಜ್ಯಾದ್ಯಂತ ವೈದ್ಯಕೀಯ ಕಾಲೇಜು ಹಾಸ್ಟೆಲ್ ಕ್ಯಾಂಟೀನ್‌ಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ ಮುಂದುವರೆದಿದೆ. 34 ಕ್ಯಾಂಟೀನ್‌ಗಳ ಪರಿಶೀಲನೆ ವೇಳೆ ಅವಧಿ ಮೀರಿದ ಆಹಾರ ಪದಾರ್ಥ ಪತ್ತೆಯಾಗಿದ್ದು, 5 ಕ್ಯಾಂಟೀನ್‌ಗಳಿಗೆ ನೋಟಿಸ್ ನೀಡಲಾಗಿದೆ.
ರಾಜ್ಯದಲ್ಲಿ ಆಹಾರ ಸುರಕ್ಷತೆ ವಿಚಾರದಲ್ಲಿ ಸರ್ಕಾರ ಅಲರ್ಟ್ ಆಗಿದೆ. ಆರೋಗ್ಯ ಸಚಿವ ಯು.ಟಿ ಖಾದರ್ ನೇತೃತ್ವದಲ್ಲಿ ಇಂದು ಹೋಟೆಲ್ ಮಾಲೀಕರ ಸಂಘದ ಜೊತೆ ಮಹತ್ವದ ಸಭೆ ನಡೆದಿದೆ. ಸಭೆಯಲ್ಲಿ ಇಲಾಖೆಯ ಕಾರ್ಯದರ್ಶಿ, ಆಯುಕ್ತರು ಹಾಗೂ ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳು ಭಾಗಿಯಾಗಿದ್ದರು. ಸಭೆಯಲ್ಲಿ ಹೋಟೆಲ್‌ಗಳಲ್ಲಿ ಸ್ವಚ್ಛತೆ, ಆಹಾರದ ಗುಣಮಟ್ಟ ಹಾಗೂ ಸುರಕ್ಷತೆಗೆ ಆದ್ಯತೆ ನೀಡುವಂತೆ ಸೂಚನೆ ನೀಡಲಾಗಿದೆ.
ಹೋಟೆಲ್‌ಗಳ ಕಿಚನ್‌ನಲ್ಲಿ ಕಡ್ಡಾಯವಾಗಿ CCTV ಅಳವಡಿಕೆ ಮಾಡಬೇಕು. ವೈಜ್ಞಾನಿಕ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಕಡ್ಡಾಯ. ಅಡುಗೆಗೆ ಬಳಸುವ ಪ್ರತಿ ಆಹಾರ ಪದಾರ್ಥದ ಮೇಲೂ MFD ಮತ್ತು Expiry Date ಕಡ್ಡಾಯವಾಗಿ ನಮೂದಿಸಬೇಕು. ಬಳಸುವ ಪ್ರತಿಯೊಂದು ಪದಾರ್ಥವೂ ಉನ್ನತ ಗುಣಮಟ್ಟದ್ದಾಗಿರಬೇಕು ಎಂದು ಖಡಕ್ ಸೂಚನೆ ನೀಡಲಾಗಿದೆ.
ಇದೇ ವೇಳೆ ಹೋಟೆಲ್ ಮಾಲೀಕರ ಸಂಘದಿಂದಲೂ ಕೆಲ ಸಲಹೆಗಳನ್ನು ನೀಡಲಾಗಿದೆ. ಗ್ರಾಹಕರಿಗೆ QR ಕೋಡ್ ವ್ಯವಸ್ಥೆ ಮೂಲಕ ರೇಟಿಂಗ್ ನೀಡುವ ಅವಕಾಶ ಕಲ್ಪಿಸುವಂತೆ ಮನವಿ ಮಾಡಲಾಗಿದೆ. ಉತ್ತಮ, ಸಾಮಾನ್ಯ, ಕಳಪೆ ಹೀಗೆ ಮೂರು ರೀತಿಯಲ್ಲಿ ರೇಟಿಂಗ್ ನೀಡುವ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಚರ್ಚೆ ನಡೆದಿದೆ. ಇದರಿಂದ ಹೋಟೆಲ್‌ಗಳ ಗುಣಮಟ್ಟ ಇನ್ನಷ್ಟು ಸುಧಾರಣೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಇತ್ತ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳ ದಾಳಿ ಮುಂದುವರೆದಿದೆ. ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ ಹಾಸ್ಟೆಲ್ ಕಿಚನ್‌ಗಳಿಗೆ ಅಧಿಕಾರಿಗಳು ಲಗ್ಗೆಯಿಟ್ಟಿದ್ದಾರೆ. ಒಟ್ಟು 34 ಕ್ಯಾಂಟೀನ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಪರಿಶೀಲನೆ ವೇಳೆ 5 ಕ್ಯಾಂಟೀನ್‌ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ತಪಾಸಣೆ ವೇಳೆ ಒಂದು ಕ್ಯಾಂಟೀನ್‌ನಲ್ಲಿ ಲೇಬಲಿಂಗ್ ಇಲ್ಲದ ಪದಾರ್ಥ ಪತ್ತೆಯಾಗಿದೆ. ಕೆಲ ಹಾಸ್ಟೆಲ್ ಕ್ಯಾಂಟೀನ್‌ಗಳಲ್ಲಿ 7 ಕೆಜಿ ಅವಧಿ ಮೀರಿದ ರವೆ ಹಾಗೂ 8 ಲೀಟರ್ ಅವಧಿ ಮೀರಿದ ಹಾಲು ಪತ್ತೆಯಾಗಿದ್ದು, ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ನಿಯಮ ಉಲ್ಲಂಘನೆ ಮಾಡಿದ ಕ್ಯಾಂಟೀನ್‌ಗಳ ವಿರುದ್ಧ ಪ್ರಕರಣ ದಾಖಲಿಸಿ, ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಹಾಜರಾಗುವಂತೆ ಕ್ರಮ ಕೈಗೊಳ್ಳಲಾಗಿದೆ.
ಒಟ್ಟಿನಲ್ಲಿ ಆಹಾರ ಸುರಕ್ಷತೆ ವಿಚಾರದಲ್ಲಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಹೋಟೆಲ್‌ಗಳಿಂದ ಹಿಡಿದು ಹಾಸ್ಟೆಲ್ ಕ್ಯಾಂಟೀನ್‌ವರೆಗೂ ಗುಣಮಟ್ಟ ಕಾಯ್ದುಕೊಳ್ಳದಿದ್ದರೆ ಕಠಿಣ ಕ್ರಮ ಫಿಕ್ಸ್ ಎಂದು ಸಚಿವ ಯು.ಟಿ ಖಾದರ್ ಎಚ್ಚರಿಕೆ ನೀಡಿದ್ದಾರೆ.
ಹೊಟೇಲ್‌ಗಳಲ್ಲಿ ಬಳಸಿದ ತೈಲದಲ್ಲಿ ಬಹುಪಾಲು ಮತ್ತೆ ಆಹಾರ ತಯಾರಿಕೆಗೆ ಹೋಗುತ್ತದೆ. ಕೆಲವು ಮಧ್ಯವರ್ತಿಗಳು ಹೊಟೇಲ್‌ಗಳಿಂದ ಪ್ರತಿ ಲೀಟರ್‌ಗೆ 20-30 ರೂ.ಗೆ ಖರೀದಿಸಿ ರಾಸಾಯನಿಕ ಬಳಸಿ ಮೇಲ್ನೋಟಕ್ಕೆ ಶುದ್ಧವಾಗಿ ಕಾಣುವಂತೆ ಮಾಡುತ್ತಾರೆ. ಈ ತೈಲವನ್ನು ವಿವಿಧ ಬ್ಯಾಂಡ್ ನ ತೈಲವಾಗಿ ನಕಲಿ ಪ್ಯಾಕ್ ಮಾಡುವ ದಂಧೆ ನಡೆಯುತ್ತಿದೆ. ಇನ್ನುಳಿದಂತೆ ರಸ್ತೆಬದಿ ಆಹಾರ ತಯಾರಿಕೆ ಮಾಡುವವರು ಹಾಗೂ ಅಸಂಘಟಿತವಾಗಿ ಚಿಪ್ಸ್ ಸಹಿತ ಕರಿದ ತಿಂಡಿಗಳನ್ನು ಮಾಡುವವರು ಖರೀದಿಸುತ್ತಾರೆ.






