ಆರೋಗ್ಯ

ಉಡುಪಿಯಲ್ಲಿ ರಾಸಾಯನಿಕ ಬಳಸಿ ಬಾಳೆಕಾಯಿ ಹಣ್ಣಾಗಿಸಿ ಮಾರಾಟ ಮಾಡುತ್ತಿದ್ದ ಜಾಲದ ಮೇಲೆ ಕಾರ್ಯಾಚರಣೆ

Views: 90

ಕನ್ನಡ ಕರಾವಳಿ ಸುದ್ದಿ: ರಾಸಾಯನಿಕ ಬಳಸಿ ಬಾಳೆಹಣ್ಣು ಹಣ್ಣಾಗಿಸಿ ಮಾರಾಟ ಮಾಡುತ್ತಿದ್ದ ಜಾಲದ ವಿರುದ್ಧ ಆರೋಗ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಉಡುಪಿಯ ಅಲೆವೂರು ಗ್ರಾಮದ ಹಲವೆಡೆ ದಾಳಿ ನಡೆಸಿದ ಅಧಿಕಾರಿಗಳ ತಂಡ, ಹಣ್ಣು ಹಣ್ಣಾಗಿಸಲು ಬಳಸುತ್ತಿದ್ದ ಹಾನಿಕಾರಕ ರಾಸಾಯನಿಕ ಹಾಗೂ ಕೃತಕ ಬಣ್ಣಗಳನ್ನು ವಶಕ್ಕೆ ಪಡೆದಿದೆ. ಅಸಿಸ್ಟೆಂಟ್ ಕಮಿಷನ‌ರ್ ರಶ್ಮಿ ಎಸ್.ಆರ್. ಅವರ ನೇತೃತ್ವದಲ್ಲಿ ಆರೋಗ್ಯ ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಿದೆ.

ಅಲೆವೂರು ಗ್ರಾಮದ ಕೆಸ್ತೂರು ಹಾಗೂ ಮಣಿಪಾಲ ಸಮೀಪದ ದುಗ್ಗಿ ಪರಿಸರದಲ್ಲಿರುವ ಬಾಳೆಹಣ್ಣು ವ್ಯಾಪಾರಸ್ಥರು ಮತ್ತು ದಾಸ್ತಾನುದಾರರಿಗೆ ಸೇರಿದ ಮೂರು ಗೋದಾಮುಗಳ ಮೇಲೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಬಾಳೆಹಣ್ಣುಗಳನ್ನು ತ್ವರಿತವಾಗಿ ಹಣ್ಣಾಗಿಸಲು ಬಳಸುತ್ತಿದ್ದ ಹಾನಿಕಾರಕ ರಾಸಾಯನಿಕಗಳು ಪತ್ತೆಯಾಗಿವೆ. ಜೊತೆಗೆ ಬಾಳೆಹಣ್ಣುಗಳಿಗೆ ಕೃತಕ ಬಣ್ಣ ನೀಡಲು ಬಳಸುತ್ತಿದ್ದ ಪದಾರ್ಥಗಳನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಬಾಳೆ ಹಣ್ಣುಗಳಿಗೆ ರಾಸಾಯನಿಕ ಬಳಕೆ ಮಾಡಲು ಉಪಯೋಗಿಸುತ್ತಿದ್ದ ವಿವಿಧ ಸಾಮಗ್ರಿಗಳು ಹಾಗೂ ಸಾಧನಗಳು ದಾಳಿ ವೇಳೆ ಪತ್ತೆಯಾಗಿವೆ. ಹಣ್ಣುಗಳನ್ನು ನೈಸರ್ಗಿಕವಾಗಿ ಹಣ್ಣಾಗಿಸುವ ಬದಲು ರಾಸಾಯನಿಕ ಹಾಗೂ ಕೃತಕ ಬಣ್ಣ ಬಳಸಿ ಮಾರಾಟ ಮಾಡಲಾಗುತ್ತಿದೆಯೇ ಎಂಬುದರ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಬಾಳೆಹಣ್ಣುಗಳನ್ನು ಬೇಗ ಹಣ್ಣು ಮಾಡಲು ಮಾರುಕಟ್ಟೆಯಲ್ಲಿ ಕೆಲವರು ಕ್ಯಾಲ್ಸಿಯಂ ಕಾರ್ಬೈಡ್ (Calcium Carbide) ಎಂಬ ಅಪಾಯಕಾರಿ ರಾಸಾಯನಿಕವನ್ನು ಬಳಸುತ್ತಿದ್ದಾರೆ. ಇದನ್ನು ‘ಮಸಾಲಾ’ ಅಥವಾ ರಾಸಾಯನಿಕ ಪುಡಿ ಎಂದೂ ಕರೆಯುತ್ತಾರೆ. ಈ ಹಾನಿಕಾರಕ ದಂಧೆಯು ವ್ಯಾಪಾರಿಗಳ ಲಾಭಕೋರತನದಿಂದ ನಡೆಯುತ್ತಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.ರಾಸಾಯನಿಕ ಹಣ್ಣುಗಳ ದುಷ್ಪರಿಣಾಮಗಳುಕಾರ್ಬೈಡ್ ಬಳಸಿ ಹಣ್ಣು ಮಾಡುವುದರಿಂದ ಅದರಲ್ಲಿ ಆರ್ಸೆನಿಕ್ ಮತ್ತು ರಂಜಕದ ಅಂಶಗಳು ಸೇರಿಕೊಳ್ಳಬಹುದು.ಈ ಹಣ್ಣುಗಳನ್ನು ತಿಂದರೆ ವಾಂತಿ, ಭೇದಿ, ತಲೆತಿರುಗುವಿಕೆ ಮತ್ತು ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ.ದೀರ್ಘಕಾಲದ ಸೇವನೆಯಿಂದ ನರಮಂಡಲದ ಸಮಸ್ಯೆಗಳು ಮತ್ತು ಆರೋಗ್ಯಕ್ಕೆ ತೀವ್ರ ಹಾನಿ ಉಂಟಾಗುತ್ತದೆ.

ಕಾರ್ಯಾಚರಣೆಯಲ್ಲಿ ರಾಸಾಯನಿಕಗಳು ಹಾಗೂ ಕೃತಕ ಬಣ್ಣಗಳ ಜೊತೆಗೆ ಕೃತ್ಯಕ್ಕೆ ಬಳಸಲಾಗುತ್ತಿದ್ದ ವಾಹನಗಳನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಾಳೆಹಣ್ಣುಗಳ ಸಂಗ್ರಹಣೆ, ಹಣ್ಣಾಗಿಸುವ ಪ್ರಕ್ರಿಯೆ ಹಾಗೂ ಮಾರಾಟದ ಸಂಪೂರ್ಣ ಜಾಲದ ಕುರಿತು ಆರೋಗ್ಯ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ರಾಸಾಯನಿಕ ಬಳಸಿ ಹಣ್ಣು ಹಣ್ಣಾಗಿಸುವುದು ಹಾಗೂ ಕೃತಕ ಬಣ್ಣ ನೀಡುವ ಪ್ರಕ್ರಿಯೆ ಗ್ರಾಹಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಉಡುಪಿ ಆರೋಗ್ಯ ಇಲಾಖೆ ಕಾರ್ಯಾಚರಣೆಯನ್ನು ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇದೆ.

Related Articles

Back to top button
error: Content is protected !!