ಡೆತ್ ನೋಟ್ ಬರೆದಿಟ್ಟು ಒಂದೇ ಕುಟುಂಬದ ನಾಲ್ವರು ಶಂಕಾಸ್ಪದವಾಗಿ ನಾಪತ್ತೆ
Views: 54
ಕನ್ನಡ ಕರಾವಳಿ ಸುದ್ದಿ: ಬೆಂಗಳೂರಿಗೆ ಹೋಗಿ ಬರುವುದಾಗಿ ಹೇಳಿ ಹೋದ ಒಂದೇ ಕುಟುಂಬದ ನಾಲ್ವರು ಮನೆಗೆ ವಾಪಸ್ ಬಾರದೆ ಅನುಮಾನಾಸ್ಪದವಾಗಿ ನಾಪತ್ತೆಯಾಗಿರುವ ಘಟನೆ ದಾವಣಗೆರೆ ನಗರದ ಬನಶಂಕರಿ ಬಡಾವಣೆಯಲ್ಲಿ ನಡೆದಿದೆ.
ರಮೇಶ್ ಕುಮಾರ್ (38), ಪತ್ನಿ ಜಯಶೀಲ (36), ಪುತ್ರ ಹಿತೇಶ್ (9) ಹಾಗೂ ಪುತ್ರಿ ಪ್ರೇರಣಾ (3) ನಾಪತ್ತೆಯಾದವರೆಂದು ವಿದ್ಯಾ ನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ದಾವಣಗೆರೆ ತಾಲೂಕಿನ ಶ್ಯಾಗಲೆ ಗ್ರಾಮದ ನಿವಾಸಿಯಾಗಿರುವ ರಮೇಶ್ ಕುಮಾರ್, ಷೇರು ಹೂಡಿಕೆ ವ್ಯವಹಾರ ಮಾಡಿಕೊಂಡು ದಾವಣಗೆರೆಯಲ್ಲಿ ಕೆಲವು ದಿನಗಳಿಂದ ಬದುಕು ಕಟ್ಟಿಕೊಂಡಿದ್ದರು. ಸಾರ್ವಜನಿಕರಿಂದ ಹಣ ಸಂಗ್ರಹಿಸಿ ರಮೇಶ್ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರು. ಇತ್ತೀಚೆಗೆ ಷೇರು ಮಾರುಕಟ್ಟೆಯಲ್ಲಿ ನಷ್ಟವಾಗಿತ್ತು ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.
ಆಗಸ್ಟ್ 12ರಂದು ಪೋಷಕರಿಗೆ ಕರೆ ಮಾಡಿ ಬೆಂಗಳೂರಿಗೆ ಹೋಗಿ ಬರುವುದಾಗಿ ಹೇಳಿದ್ದ ರಮೇಶ್ ಕುಟುಂಬಸ್ಥರು ಕಾರು, ಬೈಕ್, ಮೊಬೈಲ್ ಮನೆಯಲ್ಲಿ ಬಿಟ್ಟು ಆಟೋದಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಹೋಗಿದ್ದಾರೆ. ಅಂದಿನಿಂದ ಇಂದಿನವರೆಗೂ ಯಾವುದೇ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ರಮೇಶ್ ಸಂಬಂಧಿಕರು ಗಾಬರಿಗೊಂಡಿದ್ದಾರೆ. ಮೊಬೈಲ್ ಬಿಟ್ಟು ಹೋಗಿದ್ದು, ಸಂಬಂಧಿಕರ ಮನೆಗಳಿಗೂ ಹೋಗಿರುವ ಮಾಹಿತಿ ಸಿಗದೆ ಇದ್ದಾಗ ಮತ್ತಷ್ಟು ಆತಂಕ ಮನೆ ಮಾಡಿದೆ. ಈ ಕುರಿತಂತೆ ಕುಟುಂಬಸ್ಥರು ಕೂಡಲೇ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ರಮೇಶ್ ಕುಮಾರ್ ಹಾಗೂ ಅವರ ಕುಟುಂಬಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.






