ಆರೋಗ್ಯ

ಗರ್ಭಿಣಿಗೆ ಶಸ್ತ್ರಚಿಕಿತ್ಸೆ ನಡೆಸುವ ವೇಳೆ ಆಕೆಯ ಹೊಟ್ಟೆಯಲ್ಲಿ ಕೈಗವಸು, ಟಿಶ್ಯೂ ಪೇಪರ್ ಬಿಟ್ಟ ವೈದ್ಯರು!

Views: 21

ಕನ್ನಡ ಕರಾವಳಿ ಸುದ್ದಿ: ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಗೆ ಶಸ್ತ್ರಚಿಕಿತ್ಸೆ ನಡೆಸುವ ವೇಳೆ ಆಕೆಯ ಹೊಟ್ಟೆಯಲ್ಲಿ ಕೈಗವಸು, ಟಿಶ್ಯೂ ಪೇಪರ್ ಬಿಟ್ಟ ಆಘಾತಕಾರಿ ಘಟನೆ ನಡೆದಿದೆ.

ಜಿಲ್ಲಾ ಆಸ್ಪತ್ರೆಯಲ್ಲಿ ಸಿಸೇರಿಯನ್ ನಂತರ ಡಿಸ್ಚಾರ್ಜ್ ಆದ 19 ವರ್ಷದ ಮಹಿಳೆಯ ಹೊಟ್ಟೆಯೊಳಗೆ ವಸ್ತುಗಳು ಪತ್ತೆಯಾಗಿವೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಮಹಿಳೆ ತೀವ್ರ ಹೊಟ್ಟೆ ನೋವಿನಿಂದ ನರಳುತ್ತಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

ಏನಿದು ಘಟನೆ: ಸಂಧ್ಯಾ ಸೂರಜ್ ಗಾಯಕ್ವಾಡ್ (19) ಎಂಬ ಮಹಿಳೆ ಆಗಸ್ಟ್ 1 ರಂದು ಬೀಡ್ ಜಿಲ್ಲಾ ಆಸ್ಪತ್ರೆಯಲ್ಲಿ ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಯ 4 ದಿನಗಳ ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಮನೆಗೆ ಹಿಂದಿರುಗಿದ ಕೆಲವೇ ದಿನಗಳಲ್ಲಿ, ಅವರಿಗೆ ತೀವ್ರ ಹೊಟ್ಟೆ ಕಾಣಿಸಿಕೊಂಡಿತು.

ಕುಟುಂಬವು ಆಕೆಯನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ನಡೆಸಿದ ತಪಾಸಣೆಯಲ್ಲಿ ಮಹಿಳೆಯ ಹೊಟ್ಟೆಯಲ್ಲಿ ವಸ್ತುಗಳು ಇರುವುದು ಕಂಡುಬಂದಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಪುಣೆಯ ಸಸೂನ್ ಆಸ್ಪತ್ರೆಗೆ ದಾಖಲಿಸಲಾಯಿತು.

ಸಸೂನ್ ಆಸ್ಪತ್ರೆಯಲ್ಲಿ ದಾಖಲಿಸಿದ ಬಳಿಕ ಮತ್ತೆ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಲ್ಲಿದ್ದ ಕೈಗವಸುಗಳು ಮತ್ತು ಟಿಶ್ಯೂ ಪೇಪರ್ ಅನ್ನು ತೆಗೆದುಹಾಕಲಾಗಿದೆ. ವೈದ್ಯರ ನಿರ್ಲಕ್ಷ್ಯದಿಂದ ಒಂದು ಜೀವ ಅಪಾಯಕ್ಕೆ ಸಿಲುಕಿತ್ತು. ಜೊತೆಗೆ, ನಮ್ಮ ನೆಮ್ಮದಿ ಹಾಳು ಮಾಡಿ ಮತ್ತು ಹಣ ಪೋಲು ಮಾಡಿದ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬ ಸದಸ್ಯರು ಆಗ್ರಹಿಸಿದ್ದಾರೆ.

ಕೆಲವೇ ದಿನಗಳಲ್ಲಿ ಎರಡೆರಡು ಬಾರಿ ಮಹಿಳೆಗೆ ಆಪರೇಷನ್ ನಡೆಸಲಾಗಿದೆ. ಇದರಿಂದ, ಆಕೆಯ ಸ್ಥಿತಿ ಗಂಭೀರವಾಗಿದೆ. ಪ್ರಸ್ತುತ ಆಕೆ ಜೀವನ್ಮರಣ ನಡುವೆ ಹೋರಾಟ ನಡೆಸುತ್ತಿದ್ದಾರೆ. ಪತ್ನಿಯ ಈ ಸ್ಥಿತಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮಹಿಳೆಯ ಪತಿ ಸೂರಜ್ ಗಾಯಕ್ವಾಡ್ ಅವರು ಆರೋಪಿಸಿದ್ದಾರೆ.

ಇನ್ನೂ, ಮಹಿಳೆಯ ತಾಯಿ ತಾಯಿ ದುಃಖ ತೋಡಿಕೊಂಡಿದ್ದು, ನನ್ನ ಮಗಳು ಮಗುವಿಗೆ ಜನ್ಮ ನೀಡಿದರೂ, ಸಂಭ್ರಮಿಸುವ ಭಾಗ್ಯ ನಮಗಿಲ್ಲ. ಈಗ ಆಕೆಯ ಸ್ಥಿತಿ ಗಂಭೀರವಾಗಿದೆ. ಮಗುವನ್ನು ಎತ್ತಿಕೊಳ್ಳುವ ಶಕ್ತಿಯೂ ಆಕೆಗೆ ಇಲ್ಲ ಎಂದು ಹೇಳಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ ವೈದ್ಯಾಧಿಕಾರಿ, ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿದ ಮಹಿಳಾ ವೈದ್ಯರು ಮತ್ತು ಸಿಬ್ಬಂದಿಗೆ ನೋಟಿಸ್ ನೀಡಿದ್ದಾರೆ ಎಂದು ವರದಿಯಾಗಿದೆ. ವಿಚಾರಣೆಯ ವೇಳೆ ತಪ್ಪಿತಸ್ಥರೆಂದು ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Related Articles

Back to top button
error: Content is protected !!