ಶಾಲೆಯ ಪ್ರಿನ್ಸಿಪಾಲ್ ಹತ್ಯೆ ಮಾಡಿ 4 ಲಕ್ಷ ನಗದನ್ನು ದೋಚಿ ಪರಾರಿಯಾದ 10ನೇ ತರಗತಿ ವಿದ್ಯಾರ್ಥಿ!
Views: 143
ಕನ್ನಡ ಕರಾವಳಿ ಸುದ್ದಿ: ತೆಲಂಗಾಣದ ನಲ್ಗೊಂಡ ಜಿಲ್ಲಾ ಕೇಂದ್ರದಲ್ಲಿ ನಾಗಾರ್ಜುನ ಪಬ್ಲಿಕ್ ಶಾಲೆಯ ಪ್ರಿನ್ಸಿಪಾಲ್ ರೂಪಾರೆಡ್ಡಿ ಅವರ ಬರ್ಬರ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಕೃತ್ಯದಲ್ಲಿ ಅದೇ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಹಾಗೂ ಮತ್ತೊಬ್ಬ ವ್ಯಕ್ತಿ ಭಾಗಿಯಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಘಾತ ಮತ್ತು ಆತಂಕ ಸೃಷ್ಟಿಸಿದೆ.
ಪ್ರಾಥಮಿಕ ವಿವರಗಳ ಪ್ರಕಾರ, ಕೊಂಡಮಲ್ಲೆಪಲ್ಲಿಯ ಜೆಬಿ ಕಾಲೋನಿಯಲ್ಲಿ ವಾಸಿಸುವ ರೂಪಾ ರೆಡ್ಡಿ ಅವರ ಪತಿ ಆಗಸ್ಟ್ 11 ರ ರಾತ್ರಿ ಕೆಲಸದ ನಿಮಿತ್ತ ಹೈದರಾಬಾದ್‌ಗೆ ತೆರಳಿದ್ರು. ಈ ವೇಳೆ ರೂಪಾ ರೆಡ್ಡಿ ಮನೆಯಲ್ಲಿ ಒಬ್ಬಂಟಿಯಾಗಿದ್ದ ಸಮಯವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಅವರ ಮೇಲೆ ಅತ್ಯಂತ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ
ಜೆಬಿ ಕಾಲೋನಿಯ ತಮ್ಮ ನಿವಾಸದಲ್ಲಿದ್ದ ಪ್ರಿನ್ಸಿಪಾಲ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೈಯ್ಯಲಾಗಿತ್ತು. ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಕೈಗವಸು (ಗ್ಲೌಸ್) ಧರಿಸಿ ಬಂದಿದ್ದ ದುಷ್ಕರ್ಮಿಗಳು ಯಾವುದೇ ಬೆರಳಚ್ಚು ಸಿಗದಂತೆ ಮುನ್ನೆಚ್ಚರಿಕೆ ವಹಿಸಿದ್ದರು.
ಚಾಕುವಿನಿಂದ 27 ಬಾರಿ ಇರಿದು ಕೊಂದಿದ್ದಾರೆ.ಹತ್ಯೆಯ ನಂತರ ಮನೆಯಲ್ಲಿದ್ದ ಸುಮಾರು ₹4 ಲಕ್ಷ ನಗದನ್ನು ದೋಚಿ ಪರಾರಿಯಾಗಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ, ಡಿಎಸ್ಪಿ ಶ್ರೀನಿವಾಸರಾವ್ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳು ತನಿಖೆ ಕೈಗೆತ್ತಿಕೊಂಡಿದ್ದವು. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ, ಶಾಲಾ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿದಂತೆ 80ಕ್ಕೂ ಹೆಚ್ಚು ಮಂದಿಯ ವಿಚಾರಣೆ ಬಳಿಕ, ಇಬ್ರಾಹಿಂಪಟ್ಟಣಂ ಬಳಿ ಮೂವರನ್ನು ವಶಕ್ಕೆ ಪಡೆಯಲಾಯಿತು. ವಿಚಾರಣೆ ವೇಳೆ 10ನೇ ತರಗತಿಯ ವಿದ್ಯಾರ್ಥಿ ವಂಶಿ ಹಾಗೂ ಮತ್ತೊಬ್ಬ ವ್ಯಕ್ತಿಯ ಪಾತ್ರ ದೃಢಪಟ್ಟಿದೆ.
ಗುರು-ಶಿಷ್ಯರ ಪವಿತ್ರ ಸಂಬಂಧವನ್ನು ಗಾಳಿಗೆ ತೂರಿ, ಹಣದಾಸೆಗಾಗಿ ಸ್ವತಃ ಶಾಲೆಯ ಮುಖ್ಯಸ್ಥರನ್ನೇ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿ ಬರ್ಬರವಾಗಿ ಹತ್ಯೆ ಮಾಡಿರುವುದು ಇಂದಿನ ಪೀಳಿಗೆಯ ನಡವಳಿಕೆ, ಮೌಲ್ಯಗಳ ಕುಸಿತ ಹಾಗೂ ಡಿಜಿಟಲ್ ಯುಗದ ದುಷ್ಪರಿಣಾಮಗಳ ಕುರಿತು ಗಂಭೀರ ಚರ್ಚೆಗೆ ನಾಂದಿ ಹಾಡಿದೆ.






