ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನಿಧನ
Views: 51
ಕನ್ನಡ ಕರಾವಳಿ ಸುದ್ದಿ: ಸರಳ ವ್ಯಕ್ತಿತ್ವದಿಂದ ರಾಜಕೀಯದಲ್ಲಿ ಛಾಪು ಮೂಡಿಸಿದ್ದ, ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಅನಾರೋಗ್ಯದ ಕಾರಣದಿಂದ ಮಂಗಳವಾರ ಬೆಂಗಳೂರಿನ ಜಯನಗರದ ಪುತ್ರಿಯ ಮನೆಯಲ್ಲಿ ನಿಧನರಾಗಿದ್ದಾರೆ.
ಅವರಿಗೆ 67 ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ತುಮಕೂರು ಜಿಲ್ಲೆಯ ಕೊಬ್ಬರಿ ನಾಡು ತಿಪಟೂರು ವಿಧಾನಸಭಾ ಕ್ಷೇತ್ರವನ್ನು ಬಿಜೆಪಿಯಿಂದ ಎರಡು ಬಾರಿ ಪ್ರತಿನಿಧಿಸಿ ರಾಜ್ಯ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಜುಲೈ 1, 1959ರಂದು ಬೆಳ್ಳೂರು ಎಸ್. ಚಂದ್ರಶೇಖರಯ್ಯ, ಸಾವಿತ್ರಮ್ಮ ದಂಪತಿ ಮಗನಾಗಿ ಜನಿಸಿದ್ದರು. ಎಂಜಿನಿಯರಿಂಗ್ ಪದವಿ ಪಡೆದು ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿದರು. ರಾಜಕಾರಣದ ಜತೆಗೆ ಕೃಷಿ ಮತ್ತು ವ್ಯಾಪಾರದಲ್ಲಿ ಕೂಡ ತೊಡಗಿಕೊಂಡಿದ್ದರು.
ವಿದ್ಯಾರ್ಥಿ ದೆಸೆಯಿಂದಲೇ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದ ಬಿ.ಸಿ. ನಾಗೇಶ್ ಅವರು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಲಕ ತಮ್ಮ ಸಂಘಟನಾ ಪಯಣ ಆರಂಭಿಸಿದರು. ತದನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಬಿಜೆಪಿಯ ವಿವಿಧ ಹಂತಗಳಲ್ಲಿ ಪ್ರಮುಖ ಸಾಂಸ್ಥಿಕ ಜವಾಬ್ದಾರಿಗ ಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ತಿಪಟೂರು ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆ ಪ್ರವೇಶ ಮಾಡಿ ಮೊದಲ ಬಾರಿ 2008 ರಿಂದ 2013 ರವರೆಗೆ ಶಾಸಕರಾಗಿ ಆಯ್ಕೆಯಾದರು. 20130 ಚುನಾವಣೆಯಲ್ಲಿ ಸೋಲುಂಡರೂ, ಬಳಿಕ 2018 ರಿಂದ 2023 ರವರೆಗೆ ಎರಡನೇ ಬಾರಿ ಭರ್ಜರಿ ಜಯಗಳಿಸಿ ಶಾಸಕರಾದರು. ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವರಾಗಿ (ಆಗಸ್ಟ್ 4, 2021 ರಿಂದ ಮೇ 13, 2023) ಸೇವೆ ಸಲ್ಲಿಸಿದರು.
ಅಂತಿಮ ದರ್ಶನ: ಬುಧವಾರ ಬೆಳಗ್ಗೆ ತಿಪಟೂರಿನಲ್ಲಿ ನಾಗೇಶ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆಗೊಳಿಸಲಾಗಿದೆ. ಮೃತರ ಅಂತ್ಯಕ್ರಿಯೆಯನ್ನು ಅವರ ಸ್ವಂತ ತೋಟದಲ್ಲೇ ನೆರವೇರಿಸಲಾಗುವುದೆಂದು ಕುಟುಂಬದ ಮೂಲಗಳು ತಿಳಿಸಿವೆ.






