ರಾಜಕೀಯ

ಡಿಕೆಶಿ ಸಚಿವ ಸಂಪುಟದಲ್ಲಿ ಹಾಲಿ ಖಾತೆ ಬದಲಾವಣೆ: ಸಂಭವನೀಯ ಖಾತೆಗಳು?

Views: 37

ಕನ್ನಡ ಕರಾವಳಿ ಸುದ್ದಿ: ಡಿ.ಕೆ.ಶಿವಕುಮಾರ್ ಸಂಪುಟದ ನೂತನ ಸಚಿವರಿಗೆ ಮಂಗಳವಾರ ಬಹುತೇಕ ಖಾತೆ ಹಂಚಿಕೆ ಮಾಡುವ ನಿರೀಕ್ಷೆ ಇದೆ. ಈ ನಡುವೆ ಹಾಲಿ ಸಚಿವರ ಪೈಕಿ ಕೆಲವರ ಖಾತೆಗಳು ಅದಲು-ಬದಲಾಗುವ ಸಾಧ್ಯತೆ ಇದೆ.

ಆ.3ರಂದು ಸಂಪುಟ ವಿಸ್ತರಣೆಯಾಗಿದ್ದು, 8 ದಿನ ಕಳೆದರೂ ಖಾತೆ ಇಲ್ಲದೆ ಸಚಿವರು ಜಿಲ್ಲೆಗಳಲ್ಲಿ ಬರ ಅಧ್ಯಯನದ ಪ್ರವಾಸ ಮಾಡುತ್ತಿದ್ದಾರೆ. ವಿಧಾನಮಂಡಲ ಅಧಿವೇಶನಕ್ಕೆ ಒಂದು ದಿನ ಮಾತ್ರ ಬಾಕಿಯಿದ್ದು, ಖಾತೆಗಳ ಮಾಹಿತಿ ತಿಳಿಯದೆ ನೂತನ ಸಚಿವರು ಗೊಂದಲದಲ್ಲಿದ್ದಾರೆ. ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಡರಾತ್ರಿ ಒಂದು ಗಂಟೆಯವರೆಗೂ ಪಕ್ಷದ ವರಿಷ್ಠರನ್ನೂ ಭೇಟಿ ಮಾಡಿ, ಖಾತೆ ಹಂಚಿಕೆ ಕುರಿತು ಚರ್ಚೆ ನಡೆಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಅಲ್ಲದೆ, ಭಾನುವಾರ ತಡರಾತ್ರಿ ಕೆ.ಸಿ. ವೇಣುಗೋಪಾಲ್ ಅವರ ಮನೆಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದ್ದಲ್ಲದೆ, ಖಾತೆ ಹಂಚಿಕೆ, ವಿಧಾನಸಭೆ, ವಿಧಾನ ಪರಿಷತ್ತಿನ ಅಧ್ಯಕ್ಷರ ಆಯ್ಕೆ, ಸಂಪುಟದಲ್ಲಿ ಖಾಲಿಯಿರುವ ಒಂದು ಸ್ಥಾನಕ್ಕೆ ನೇಮಕಾತಿ ಮತ್ತು ನಿಗಮ-ಮಂಡಳಿಗಳ ಅಧ್ಯಕ್ಷರ ಆಯ್ಕೆಯ ಬಗ್ಗೆ ಚರ್ಚೆ ನಡೆಸಿ ಸೋಮವಾರ ಬೆಂಗಳೂರಿಗೆ ಹಿಂದಿರುಗಿದ್ದಾರೆ.

ಡಿಕೆಶಿ ಸಂಪುಟದ ಸಂಭವನೀಯ ಖಾತೆಗಳು?

ಎಚ್.ಸಿ.ಬಾಲಕೃಷ್ಣ ಅವರಿಗೆ ಅರಣ್ಯ, ಪರಿಸರ, ಜೀವ ಶಾಸ್ತ್ರಖಾತೆ ನೀಡುವುದಾಗಿ ಹೇಳಲಾಗಿತ್ತು, ಆದರೆ ಕೊನೆ ಕ್ಷಣದಲ್ಲಿ ಉನ್ನತ ಶಿಕ್ಷಣ ಖಾತೆಗೆ ಅವರ ಹೆಸರು ಕೇಳಿ ಬರುತ್ತಿದೆ. ಲಕ್ಷ್ಮಣ ಸವದಿಗೆ ಸಹಕಾರ, ವಿಜಯಾನಂದ ಕಾಶಪ್ಪನವರ್‌ಗೆ ಕೃಷಿ ಮಾರುಕಟ್ಟೆ, ಬಸವರಾಜ ರಾಯರೆಡ್ಡಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೆ.ಎಸ್.ಬಸಂತಪ್ಪಗೆ ಪೌರಾಡಳಿತ, ರುದ್ರಪ್ಪ ಲಮಾಣಿಗೆ ಅಬಕಾರಿ, ಟಿ.ರಘುಮೂರ್ತಿಗೆ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ, ರಿಜ್ವಾನ್ ಅರ್ಷದ್‌ ಹಜ್ ಮತ್ತು ವಕ್ಸ್, ಪುಟ್ಟರಂಗ ಶೆಟ್ಟಿಗೆ ಹಿಂದುಳಿದ ವರ್ಗಗಳ ಕಲ್ಯಾಣ, ಅಜಯ್ ಸಿಂಗ್‌ ಆಹಾರ ಮತ್ತು ನಾಗರಿಕ ಪೂರೈಕೆ, ಸಂತೋಷ್ ಲಾಡ್‌ಗೆ ಕಾರ್ಮಿಕ, ಚೆಲುವರಾಯ ಸ್ವಾಮಿಗೆ ಕೃಷಿ, ಮಧು ಬಂಗಾರಪ್ಪಗೆ ಶಾಲಾ ಶಿಕ್ಷಣ, ಸಾಕ್ಷರತೆ, ಜಮೀರ್ ಅಹಮದ್ ಖಾನ್‌ಗೆ ಅಲ್ಪ ಸಂಖ್ಯಾತರ ಅಭಿವೃದ್ಧಿ ಖಾತೆ ಹಂಚಿಕೆಯಾಗುವ ಸಾಧ್ಯತೆ ಇದೆ.

ವಿಧಾನಸಭಾ ಅಧ್ಯಕ್ಷ ಸ್ಥಾನಕ್ಕೆ ಈ ಮೊದಲು ಜಿ.ಎಸ್.ಪಾಟೀಲ್ ಅವ ರನ್ನು ಅಧ್ಯಕ್ಷರೆಂದು ಘೋಷಿಸಲಾಗಿತ್ತು. ಆದರೆ ಟಿ.ಬಿ.ಜಯಚಂದ್ರ ಅವರನ್ನು ಸಮಾಧಾನಪಡಿಸಲು ವಿಧಾನಸಭೆಯ ಅಧ್ಯಕ್ಷ ಸ್ಥಾನ ನೀಡುವ ಚರ್ಚೆಗಳಾಗಿವೆ. ಜಿ.ಎಸ್.ಪಾಟೀಲ್ ಅವರನ್ನು ಸಮಾಧಾನಪಡಿಸುವ ಹೊಣೆಗಾರಿಕೆಯನ್ನು ಎಚ್‌. ಕೆ.ಪಾಟೀಲ್ ಅವರಿಗೆ ವಹಿಸಲಾಗುತ್ತಿದೆ ಎನ್ನಲಾಗಿದೆ. ಸಚಿವ ಸಂಪುಟದ ಖಾತೆ ಹಂಚಿಕೆ ಬಗ್ಗೆ ಹೈಕಮಾಂಡ್ ನಾಯಕರು ಡಿ.ಕೆ.ಶಿವಕುಮಾರ್ ಅವರಿಗೆ ಕೆಲ ನಿರ್ದೇಶನ ನೀಡಿದ್ದು, ಪ್ರಸ್ತಾವಿತ ಪಟ್ಟಿಗೆ ಅನುಮೋದನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಮೂಲಗಳ ಪ್ರಕಾರ, ರಾಮಲಿಂಗಾರೆಡ್ಡಿ ಯವರಿಗೆ ಜಲಸಂಪನ್ಮೂಲ ಬದಲಾಗಿ ವಸತಿ ಖಾತೆ ನೀಡುವ ಸಾಧ್ಯತೆ ಇದೆ. ಸಚಿವ ಕೆ.ಎಚ್. ಮುನಿಯಪ್ಪ ತಮಗೆ ಆಹಾರ ಮತ್ತು ನಾಗರಿಕ ಪೂರೈಕೆ ಬೇಡ, ಸಮಾಜ ಕಲ್ಯಾಣ ಇಲಾಖೆ ಬೇಕು ಎಂದು ಪಟ್ಟು ಹಿಡಿದಿದ್ದರು. ಡಿ.ಕೆ.ಶಿವಕುಮಾರ್ ಅವರ ಜತೆ ಮುನಿಯಪ್ಪ ದೆಹಲಿಗೂ ತೆರಳಿದ್ದರು. ಸಮಾಜ ಕಲ್ಯಾಣ ಇಲಾಖೆಯ ಮೇಲೆ ಕಣ್ಣಿಟ್ಟಿರುವ ಪಿ.ಎಂ.ನರೇಂದ್ರ ಸ್ವಾಮಿ, ಶಿವರಾಜ್ ತಂಗಡಗಿ ಅವರು ಕೂಡ ದೆಹಲಿ ಪ್ರವಾಸದಲ್ಲಿ ಮುಖ್ಯಮಂತ್ರಿಯವರ ಜತೆಗಿದ್ದರು. ಮಹಿಳಾ ಕೋಟಾದಡಿ ಸಚಿವ ಸ್ಥಾನ ನೀಡಲು ಮುನಿಯಪ್ಪ ಅವರ ಪುತ್ರಿ ರೂಪಕಲಾ ಅವರನ್ನು ಹೈಕಮಾಂಡ್ ಗುರುತಿಸಿದೆ. ಮುನಿಯಪ್ಪ ಅವರಿಗೆ ಸಚಿವ ಸ್ಥಾನ ತೊರೆದು ಮುಂದಿನ ಲೋಕಸಭಾ ಚುನಾವಣೆಗೆ ತಯಾರಿ ನಡೆಸುವಂತೆ ಸಲಹೆ ನೀಡಲಾಗಿತ್ತು. ಮುನಿಯಪ್ಪ ಅವರಿಂದ ತೆರವಾದ ಸಚಿವ ಸ್ಥಾನಕ್ಕೆ ಪುತ್ರಿ ರೂಪಕಲಾ ಅವರನ್ನು ನಿಯೋಜಿಸುವುದಾಗಿ ಹೈಕಮಾಂಡ್ ಭರವಸೆ ನೀಡಿತ್ತು. ಆದರೆ ಮುನಿಯಪ್ಪ ಇದನ್ನು ತಳ್ಳಿ ಹಾಕಿದ್ದು, ನಾನು ಸಚಿವ ಸ್ಥಾನ ಬಿಡುವುದಿಲ್ಲ. ತಾವೇ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದಾರೆ.

ಸಚಿವ ಸ್ಥಾನದಲ್ಲಿ ಮುಂದುವರಿಯುವುದಾದರೆ ಸಮಾಜ ಕಲ್ಯಾಣ ಇಲಾಖೆ ಕೇಳಬಾರದು ಎಂದು ಷರತ್ತು ವಿಧಿಸಲಾಗಿದ್ದು, ಅದಕ್ಕೆ ಮುನಿಯಪ್ಪ ಒಪ್ಪಿದ್ದಾರೆ ಎಂದು ತಿಳಿದು ಬಂದಿದೆ. ರಾಮಲಿಂಗಾರೆಡ್ಡಿಯವರ ಜಲಸಂಪನ್ಮೂಲ ಖಾತೆಯನ್ನು ಮುನಿಯಪ್ಪ ಅಥವಾ ಶಿವರಾಜ್ ತಂಗಡಗಿ ಅವರಿಗೆ ನೀಡುವ ಸಾಧ್ಯತೆ ಇದೆ. ಇನ್ನು ಎಂ.ಕೃಷ್ಣಪ್ಪ ಅವರಿಗೂ ಸಚಿವ ಸ್ಥಾನ ಒಲಿಯಲಿದ್ದು, ಅಚ್ಚರಿಯ ಬದಲಾವಣೆ ಯಾದರೂ ಆಶ್ಚರ್ಯವಿಲ್ಲ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿದೆ.

Related Articles

Back to top button
error: Content is protected !!