ಎರಡು ತಿಂಗಳ ಮಗುವನ್ನು ಆರೈಕೆ ಮಾಡಲಾಗದೇ ತಾಯಿ ಸೇರಿ ಕುಟುಂಬದವರು ಬಾವಿಗೆ ಎಸೆದು ಕ್ರೂರವಾಗಿ ಕೊಲೆ
Views: 37
ಕನ್ನಡ ಕರಾವಳಿ ಸುದ್ದಿ: ಹೆತ್ತ ತಾಯಿ ಸೇರಿದಂತೆ ಸ್ವಂತ ಕುಟುಂಬದವರೇ ಸೇರಿ ಎರಡು ತಿಂಗಳ ಗಂಡು ಮಗುವನ್ನು ಬಾವಿಗೆ ಎಸೆದು ಕ್ರೂರವಾಗಿ ಕೊಲೆ ಮಾಡಿ ಮಗು ಕಾಣೆಯಾಗಿದ್ದಾನೆ ಎಂದು ಪತಿಗೆ ಕರೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಬೀದರ್ ಔರಾದ್ ತಾಲೂಕಿನ ವಡಗಾಂವ ಗ್ರಾಮದಲ್ಲಿ ನಡೆದಿದ್ದು, ಭಾನುವಾರ ಪ್ರಕರಣ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ದೇಗಲೂರ ತಾಲೂಕಿನ ಕವಳಗಡ ಗ್ರಾಮದ ಸಂಜಯ ಎಂಬುವರೊಂದಿಗೆ ವಾಣಿಶ್ರೀ (32) ಅವರ ವಿವಾಹ ಒಂದು ವರ್ಷದ ಹಿಂದಷ್ಟೇ ನಡೆದಿತ್ತು. ಹೆರಿಗೆಯ ನಂತರ ಕಳೆದೆರಡು ತಿಂಗಳಿನಿಂದ ವಾಣಿಶ್ರೀ ವಡಗಾಂವನ ತವರು ಮನೆಯಲ್ಲೇ ವಾಸವಾಗಿದ್ದರು. ಆದರೆ ಶನಿವಾರ ರಾತ್ರಿ ಇದ್ದಕ್ಕಿದ್ದಂತೆ ಮಗು ಕಾಣೆಯಾಗಿದೆ ಎಂದು ವಾಣಿಶ್ರೀ ತಮ್ಮ ಪತಿ ಸಂಜಯ ಅವರಿಗೆ ಫೋನ್ ಮಾಡಿ ತಿಳಿಸಿದ್ದಾರೆ. ವಿಷಯ ತಿಳಿದ ತಕ್ಷಣ ಪತ್ನಿಯ ಗ್ರಾಮಕ್ಕೆ ಓಡಿ ಬಂದ ಸಂಜಯ, ಮಗುವಿಗಾಗಿ ಹುಡುಕಾಟ ನಡೆಸಿ ಕೊನೆಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕೃತ್ಯ ಎಸಗಿದ ಕುಟುಂಬಸ್ಥರು ಪ್ರಕರಣವನ್ನು ಹೇಗಾದರೂ ಮಾಡಿ ಮುಚ್ಚಿಹಾಕಲು ಸಂಚು ರೂಪಿಸಿದ್ದರು. “ನಮ್ಮ ಮಗುವನ್ನು ದೇವರು ತನ್ನ ಬಳಿಗೆ ಕೊಂಡೊಯ್ದಿದ್ದಾನೆ” ಎಂದು ಗ್ರಾಮಸ್ಥರೆದುರು ಸುಳ್ಳು ಕಥೆ ಕಟ್ಟಿ ನಂಬಿಸಲು ಯತ್ನಿಸಿದ್ದರು. ಆದರೆ, ಅನುಮಾನಗೊಂಡ ಸಂತಪುರ ಠಾಣೆಯ ಪೊಲೀಸರು ಕುಟುಂಬದವರನ್ನು ವಶಕ್ಕೆ ಪಡೆದು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಿದ್ದಿದೆ.
ಪೋಲಿಸರ ಕಠಿಣ ವಿಚಾರಣೆಯ ವೇಳೆಯಲ್ಲಿ ಮಗುವನ್ನು ಕೊಲೆ ಮಾಡಿರುವುದಾಗಿ ಕುಟುಂಬಸ್ಥರು ಒಪ್ಪಿಕೊಂಡಿದ್ದಾರೆ. ಅವರ ಮಾಹಿತಿಯನ್ನಾಧರಿಸಿ ಶೋಧ ನಡೆಸಿದಾಗ ಗ್ರಾಮದ ಸಂಗಮೇಶ್ವರ ದೇವಸ್ಥಾನದ ಬಳಿಯಿರುವ ಬಾವಿಯಲ್ಲಿ ಎರಡು ತಿಂಗಳ ಕಂದಮ್ಮನ ಮೃತದೇಹ ಪತ್ತೆಯಾಗಿದೆ.
ಈ ಸಂಬಂಧ ಕೊಲೆ ಆರೋಪದ ಮೇಲೆ ಮಗುವಿನ ತಾಯಿ ವಾಣಿಶ್ರೀ (32), ಸೋದರ ಮಾವ ಸಂತೋಷ ಮಸ್ಕಲೆ (35), ಅಜ್ಜ ಬಸಪ್ಪ ಮಸ್ಕಲೆ (70) ಹಾಗೂ ಅಜ್ಜಿ ರತ್ನಮ್ಮ (65) ಅವರನ್ನು ಸಂತಪುರ ಪೊಲೀಸರು ಬಂಧಿಸಿದ್ದಾರೆ.
ಆರೈಕೆ ಮಾಡಲು ಸಾಧ್ಯವಾಗದ ಕಾರಣ ಮಗುವನ್ನು ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಮೂಢನಂಬಿಕೆಯೂ ಈ ಕೃತ್ಯದ ಹಿಂದೆ ಕಾರಣವಾಗಿರಬಹುದೇ ಎಂಬ ಶಂಕೆಯೂ ವ್ಯಕ್ತವಾಗಿದೆ. ಆದರೆ ಕೊಲೆಯ ನಿಖರ ಕಾರಣ ತನಿಖೆಯಿಂದ ಇನ್ನಷ್ಟು ಸ್ಪಷ್ಟವಾಗಬೇಕಿದೆ. ಈ ಕುರಿತು ಸಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.






