ಕೊನೇ ಕ್ಷಣದ ಟ್ವಿಸ್ಟ್..! ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ಎನ್.ಎಸ್.ಬೋಸರಾಜುಗೆ ಒಲಿದ ಮಂತ್ರಿಗಿರಿ
Views: 31
ಕನ್ನಡ ಕರಾವಳಿ ಸುದ್ದಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟ ಸೇರುವ ನೂತನ ಸಚಿವರು ಯಾರೆಂಬ ಕುತೂಹಲಕ್ಕೆ ಇಂದು ತೆರೆಬಿದ್ದಿದೆ. ನಿನ್ನೆ ಸಂಜೆ 5 ಗಂಟೆಗೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಅದಕ್ಕೂ ಮುನ್ನವೇ ಸಂಪುಟ ವಿಸ್ತರಣೆಯಲ್ಲಿ ಮಹತ್ವದ ಬಲಾವಣೆಗಳು ನಡೆದಿವೆ.
ಆರಂಭದಲ್ಲಿ ಎಐಸಿಸಿ ಬಿಡುಗಡೆ ಮಾಡಿದ 20 ಸಚಿವರ ಪಟ್ಟಿಯಲ್ಲಿ ಭಟ್ಕಳ ಕ್ಷೇತ್ರದ ಶಾಸಕ ಮಂಕಾಳ ವೈದ್ಯ ಹಾಗೂ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರ ಹೆಸರಿತ್ತು. ಆದರೆ, ಕೊನೇ ಕ್ಷಣದಲ್ಲಿ ಟ್ವಿಸ್ಟ್ ಎನ್ನುವಂತೆ ಮಂಕಾಳ ವೈದ್ಯರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟು ದಾವಣಗೆರೆ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೆ ಹಾಗೂ ಗಾಯತ್ರಿ ಅವರ ಸ್ಥಾನವನ್ನು ಮಾಜಿ ಸಚಿವ ಎನ್.ಎಸ್. ಬೋಸರಾಜು ಅವರಿಗೆ ನೀಡಲಾಗಿದೆ. ಇದರಿಂದ ಸಚಿವ ಸ್ಥಾನದ ಆಸೆಯಲ್ಲಿದ್ದ ಮಂಕಾಳ ವೈದ್ಯ ಹಾಗೂ ಗಾಯತ್ರಿ ಅವರಿಗೆ ಭಾರಿ ನಿರಾಸೆ ಉಂಟಾಗಿದೆ.
ಗಾಯತ್ರಿ ಶಾಂತೇಗೌಡ ಅವರ ಬದಲು ಉಮಾಶ್ರೀ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ, ಕೊನೇ ಕ್ಷಣದಲ್ಲಿ ಹೈಕಮಾಂಡ್ ಬೋಸರಾಜು ಅವರಿಗೆ ಮಣೆ ಹಾಕಿದೆ. 20 ಸಚಿವರ ಪಟ್ಟಿ ಅಂತಿಮವಾಗಿದ್ದರು ಕೂಡ ಕಾಂಗ್ರೆಸ್ ಪಾಳಯದಲ್ಲಿ ಮಾತ್ರ ಗೊಂದಲ ಇನ್ನೂ ಹಾಗೇ ಮುಂದುವರಿದಿದೆ.






