ರಾಜಕೀಯ

ಡಿಕೆಶಿ ಸಚಿವ ಸಂಪುಟಕ್ಕೆ ಮತ್ತೆ ಸರ್ಜರಿ?..ಕೈಬಿಡೋದು ಯಾರನ್ನು?..ಸೇರ್ಪಡೆ ಯಾರು?

Views: 10

ಕನ್ನಡ ಕರಾವಳಿ ಸುದ್ದಿ:ಸದ್ಯ ರಾಜ್ಯದಲ್ಲಿ ಒಂದು ಸ್ಥಾನ ಹೊರತುಪಡಿಸಿ ಎಲ್ಲಾ ಸಚಿವ ಸ್ಥಾನಗಳನ್ನು ತುಂಬಲಾಗಿದೆ. ಅಸಮಾಧಾನಗೊಂಡಿರುವ ಮೂರ್ನಾಲ್ಕು ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡಲು ಈಗಿರುವ ಸಚಿವರಲ್ಲಿ ಒಂದಿಬ್ಬರಿಂದ ರಾಜೀನಾಮೆ ಪಡೆಯುವ ಅನಿವಾರ್ಯತೆಯಿದೆ. ಆದರೆ ಯಾರನ್ನು ಸಂಪುಟದಿಂದ ಕೈಬಿಡಬೇಕು, ಯಾರನ್ನು ಸೇರಿಸಿಕೊಳ್ಳಬೇಕು ಎನ್ನುವ ಬಗ್ಗೆ ದೆಹಲಿಯಲ್ಲಿ ಚರ್ಚಿಸಿ ತೀರ್ಮಾನಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಖಾಲಿಯಿರುವ ಒಂದು ಸಚಿವ ಸ್ಥಾನ ಮಹಿಳೆಯರಿಗೆ ಮೀಸಲು ಎನ್ನುವುದು ಬಹುತೇಕ ಖಚಿತವಾಗಿರುವುದರಿಂದ ಆ ಸ್ಥಾನದ ಮೇಲೆ ಲಕ್ಷ್ಮೀ ಹೆಬ್ಬಾಳರ್‌, ಖನೀಜ್ ಫಾತಿಮಾ, ನಯನಾ ಮೋಟಮ್ಮ, ಅನ್ನಪೂರ್ಣ ತುಕಾರಾಮ್, ಆರತಿ ಕೃಷ್ಣ ಕಣ್ಣಿಟ್ಟಿದ್ದಾರೆ. ಇದರೊಂದಿಗೆ ಹೈಕಮಾಂಡ್ ಪಟ್ಟಿಯಲ್ಲಿ ಗಾಯತ್ರಿ ಶಾಂತೇಗೌಡ ಅವರ ಹೆಸರು ಇದಿದ್ದರಿಂದ ಸಹಜವಾಗಿಯೇ ಅವರೂ ಸಂಪುಟ ಸ್ಥಾನಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ಇನ್ನುಳಿದಂತೆ ಹಿರಿಯ ಶಾಸಕರಾದ ಎಂ.ಕೃಷ್ಣಪ್ಪ, ಟಿ.ಬಿ.ಜಯಚಂದ್ರ ಸೇರಿದಂತೆ ಹಲವು ಹಿರಿಯ ಶಾಸಕರು ತಮಗೆ ಸಂಪುಟದಲ್ಲಿ ಸ್ಥಾನ ನೀಡದೇ ಹೋದರೆ ‘ತಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ’ ಎನ್ನುವ ಪರೋಕ್ಷ ಸಂದೇಶವನ್ನು ರವಾನಿಸುತ್ತಿದ್ದಾರೆ. ಆದ್ದರಿಂದ ಯಾವುದೇ ಬದಲಾವಣೆ ಮಾಡಬೇಡಿ ಎನ್ನುವ ಸಂದೇಶವನ್ನು ಹೈಕಮಾಂಡ್ ನೀಡಿದ್ದರೂ, ಅನಿವಾರ್ಯ ಕಾರಣಕ್ಕೆ ಕೆಲವು ಬದಲಾವಣೆಯ ಆಲೋಚನೆ ಮಾಡಲಾಗುತ್ತಿದೆ ಎನ್ನಲಾಗಿದೆ.

ಕೈಬಿಡೋದು ಯಾರನ್ನು?: 33 ಸಚಿವರಿರುವ ಸಂಪುಟಕ್ಕೆ ಸರ್ಜರಿ ಮಾಡುವ ಆಲೋಚನೆಯಲ್ಲಿ ಹೈಕಮಾಂಡ್ ಹಾಗೂ ಡಿ.ಕೆ. ಶಿವಕುಮಾ‌ರ್ ಇದ್ದರೂ, ಯಾರನ್ನು ಕೈಬಿಡಲಾಗುತ್ತದೆ ಎನ್ನುವ ಪ್ರಶ್ನೆಗೆ ಬಹುತೇಕರ ಬಳಿ ಉತ್ತರವಿಲ್ಲ. ಸಂಪುಟಕ್ಕೆ ಸೇರಿಸಿಕೊಂಡ ತಿಂಗಳು ಕಳೆಯುವ ಮೊದಲೇ, ಸಂಪುಟದಿಂದ ಕೈಬಿಟ್ಟರೆ ಈಗಿರುವ ಬಂಡಾಯಕ್ಕೆ ಮತ್ತಷ್ಟು ತುಪ್ಪ ಸುರಿದಂತಾಗುತ್ತದೆ. ಇನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದಲ್ಲಿ ಹೆಸರಲ್ಲಿ ನಾಗೇಂದ್ರ ಅವರನ್ನು ಕೈಬಿಟ್ಟು ಅದೇ ಜಿಲ್ಲೆಯ ಅನ್ನಪೂರ್ಣ ಅವರಿಗೆ ಸ್ಥಾನ ಕೊಟ್ಟರೆ ಮಹಿಳಾ ಪ್ರಾತಿನಿಧ್ಯ, ಸಮುದಾಯ ಹಾಗೂ ಜಿಲ್ಲೆಯ ಪ್ರಾತಿನಿಧ್ಯ ನೀಡಿದಂತಾಗುತ್ತದೆ. ಆದರೆ ಇದಕ್ಕೆ ನಾಗೇಂದ್ರ ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ? ಎನ್ನುವ ಆತಂಕ ನಾಯಕರಲ್ಲಿದೆ.

ಈಗಾಗಲೇ ಹಿರಿಯ ನಾಯಕರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎನ್ನುವ ಬೇಸರವಿದೆ. ಹೀಗಿರುವಾಗ, ಹಿರಿಯ ಸಚಿವರಿಂದ ರಾಜೀನಾಮೆ ಪಡೆದರೆ ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಭಾರೀ ಹೊಡೆತ ಬೀಳಲಿದೆ. ಆಗ ಆಗುವ ಡ್ಯಾಮೇಜ್ ಅನ್ನು ಯಾವ ರೀತಿ ನಿಯಂತ್ರಣ ಮಾಡಬೇಕು ಎನ್ನುವ ಗೊಂದಲವಿದೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಬಸವರಾಜ ಶಿವಣ್ಣನವರ್ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲವೆಂದು ಅಸಮಾಧಾನಗೊಂಡಿರುವ ಸಿದ್ದು, ಅಂತರ ಕಾಯ್ದುಕೊಂಡಿದ್ದಾರೆ. ಈ ಅಸಮಾಧಾನವನ್ನು ಈಗಲೇ ಸರಿಪಡಿಸದೇ ಹೋದರೆ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಹೊಡೆತ ಬೀಳುವ ಆತಂಕವಿದೆ. ಆದ್ದರಿಂದ ಈ ಬಾರಿಯ ಸರ್ಜರಿಯ ವೇಳೆ ಶಿವಣ್ಣನವರ್‌ಗೆ ಸ್ಥಾನ ಕೊಡಬೇಕಾದ ಒತ್ತಡದಲ್ಲಿ ಡಿಕೆ ಹಾಗೂ ಹೈಕಮಾಂಡ್ ಇದೆ. ಈ ಎಲ್ಲವನ್ನು ಯಾವ ರೀತಿ ನಿಭಾಯಿಸಲಿದ್ದಾರೆ ಎನ್ನುವ ಕುತೂಹಲ ಇದೀಗ ಪಕ್ಷದಲ್ಲಿ ಮೂಡಿದೆ.

Related Articles

Back to top button
error: Content is protected !!