ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಗೆ ಕಪಾಳಕ್ಕೆ ಹೊಡೆದು ಬೆದರಿಕೆ ಹಾಕಿದ ಪ್ರಕರಣ: ತಡವಾಗಿ ವಿಡಿಯೋ ವೈರಲ್
Views: 0
ಕನ್ನಡ ಕರಾವಳಿ ಸುದ್ದಿ: ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಗೆ ಬಿಜೆಪಿ ಶಾಸಕ ಸುರೇಶ್ ಗೌಡ ಅವರ ಪುತ್ರಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಪಾಳಕ್ಕೆ ಹೊಡೆದು ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋ ತಡವಾಗಿ ಹೊರಬಿದ್ದಿದೆ.
ಮಹಿಳಾ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಹಾಗೂ ಶಾಸಕರ ಪುತ್ರಿಯ ನಡುವೆ ನಡೆದಿದ್ದ ವಾಗ್ವಾದ ಹಾಗೂ ಕಪಾಳಕ್ಕೆ ಹೊಡೆಯುತ್ತಿರುವ ವಿಡಿಯೋ ದೃಶ್ಯಗಳು ಘಟನೆ ನಡೆದ ಕೆಲ ದಿನಗಳ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಸುರೇಶ್ ಗೌಡ ಅವರ ಪುತ್ರಿ ಐಶ್ವರ್ಯ ಅವರು ಆಗಸ್ಟ್ 12ರಂದು ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ದೇವಸ್ಥಾನಕ್ಕೆ ತೆರಳಿದ್ದಾಗ ಗರ್ಭಗುಡಿಗೆ ಪ್ರವೇಶಿಸುವ ವಿಚಾರಕ್ಕೆ ವಾಗ್ವಾದ ನಡೆದಿತ್ತು.
ಸದ್ಯ ಬಹಿರಂಗವಾಗಿರುವ ವಿಡಿಯೋದಲ್ಲಿ ಪಿಎಸ್‌ಐ ಸವಿತಾ ಬಿ. ಪಾಟೀಲ್ ಅವರೊಂದಿಗೆ ಐಶ್ವರ್ಯ ಅವರು ತೀವ್ರ ವಾಗ್ವಾದ ನಡೆಸುತ್ತಿರುವುದು ಕಾಣಿಸುತ್ತದೆ. ಒಂದು ಹಂತದಲ್ಲಿ ಐಶ್ವರ್ಯ ಅವರು ಯಾರಿಗೋ ಫೋನ್ ಕರೆ ಮಾಡುವ ಐಶ್ವರ್ಯ ಅವರು ವಾದ ಮುಂದುವರೆದಾಗ ಪೊಲೀಸ್ ಅಧಿಕಾರಿಯ ಕಪಾಳಕ್ಕೆ ಹೊಡೆದಿದ್ದಾರೆ. ಆಗ ಪಿಎಸ್ಐ ಸಹ ತಿರುಗಿಸಿ ಹೊಡೆದಿದ್ದಾರೆ. ನಂತರ ಸ್ಥಳದಲ್ಲಿದ್ದ ಇತರೆ ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು.
ಘಟನೆ ಬಳಿಕ ಪಿಎಸ್ಐ ಸವಿತಾ ಅವರು ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಶಾಸಕ ಸುರೇಶ್ ಗೌಡ ಅವರು ಕ್ಷಮೆಯಾಚಿಸಿದ್ದರು.
ಘಟನೆಗೆ ಸಂಬಂಧಿಸಿದಂತೆ ದೂರು – ಪ್ರತಿದೂರು ದಾಖಲಾಗಿದ್ದು, ಎರಡೂ ಪ್ರಕರಣಗಳನ್ನು ತನಿಖೆ ನಡೆಸಲಾಗುತ್ತಿದೆ ಎಂದು ಮಂಡ್ಯ ಎಸ್‌ಪಿ ಡಾ. ಶೋಭಾರಾಣಿ ತಿಳಿಸಿದ್ದಾರೆ.






