ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬಯಿ : ‘ಆಟಿಡೊಂಜಿ ದಿನ’ ಕಾರ್ಯಕ್ರಮ
Views: 230
ಕನ್ನಡ ಕರಾವಳಿ ಸುದ್ದಿ: ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬಯಿ ಆಚರಿಸಿದ ‘ಆಟಿಡೊಂಜಿ ದಿನ’ ಕಾರ್ಯಕ್ರಮವು ಆ. 9ರ ಆದಿತ್ಯವಾರದಂದು ಪದ್ಮಶಾಲಿ ಕಲಾ ಭವನದಲ್ಲಿ ಯುವ ಸಮಿತಿ ಹಾಗು ಮಹಿಳಾ ಬಳಗದ ಮುಂದಾಳತ್ವದಲ್ಲಿ ನೆರವೇರಿತು.
ಮುಂಜಾನೆ ಕಲಾಭವನದ ಮಂದಿರ ಪರಿಸರದಲ್ಲಿ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವು ಸಂಜೆಯವರೆಗೆ ಜರುಗಿತು.
ಸಂಘದ ಅಧ್ಯಕ್ಷ ಕೃಷ್ಣಾನಂದ ಎಮ್. ಶೆಟ್ಟಿಗಾರ್, ಮಹಿಳಾ ಬಳಗದ ಗೌರವ ಕಾರ್ಯದರ್ಶಿ ತಾರಾ ಯು. ಶೆಟ್ಟಿಗಾರ್, ಯುವ ಸಮಿತಿಯ ಅಧ್ಯಕ್ಷೆ ದಿವ್ಯಾ ಶೆಟ್ಟಿಗಾರ್ ಹಾಗೂ ಪ್ರಾಪರ್ಟಿ ಗ್ ಮ್ಯಾನೇಜ್‌ಮೆಂಟ್ ಸಮಿತಿಯ ಕಾರ್ಯಾಧ್ಯಕ್ಷ ಉತ್ತಮ್ ಎ. ಶೆಟ್ಟಿಗಾರ್ ಸಮ್ಮುಖದಲ್ಲಿ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾಂತಿ ಕೆ. ಶೆಟ್ಟಿಗಾರ್ “ಶುಭಮ್ ಕರೋತಿ ಕಲ್ಯಾಣಮ್…” ಶ್ಲೋಕವನ್ನು ಹಾಡುವುದರ ಮೂಲಕ ದೀಪ ಪ್ರಜ್ವಲನೆಯ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗನ್ನು ನೀಡಿದರು. 150ಕ್ಕೂ ಹೆಚ್ಚು ಪದ್ಮಶಾಲಿ ಸಮಾಜದವರು ತಮ್ಮ ಬಂಧು-ಮಿತ್ರರೊಂದಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಅತಿಥಿಯಾಗಿ ಆಗಮಿಸಿದ ಘೋಡ್‌ಬಂದರ್ ರೋಡ್ ಕನ್ನಡ ಎಸೋಸಿಯೇಶನ್‌ನ ಅಧ್ಯಕ್ಷ ಲಕ್ಷಣ್ ಮಣಿಯಾನಿ, ಕಾರ್ಯದರ್ಶಿ ವಾಣಿಶ್ರೀ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ವಂದನಾ ರೈ, ಮಾಜಿ ಅಧ್ಯಕ್ಷೆ ಪ್ರತಿಭಾ ಶೆಟ್ಟಿ ಮತ್ತು ಸದಸ್ಯರಾದ ವಿದ್ಯಾ ಶೆಟ್ಟಿ ಹಾಗು ಥಾಣೆ ಪರಿಸರದ ಸಮಾಜ ಸೇವಕ ಪ್ರಶಾಂತ್ ನಾಯಕ್ ಅವರನ್ನು ಸ್ವಾಗತಿಸಿ ಸನ್ಮಾನಿಸಲಾಯಿತು.
ಅತಿಥಿಯಾಗಿ ಆಗಮಿಸಿದ ಲಕ್ಷಣ್ ಮಣಿಯಾನಿಯವರು ಪದ್ಮಶಾಲಿ ಸಮಾಜ ಬಾಂಧವರನ್ನು ಉದ್ದೇಶಿಸಿ, ತುಳು-ಸಂಸ್ಕೃತಿಯನ್ನು ಆಚರಿಸಿ ಜೀವನದಲ್ಲಿ ಅಳವಡಿಸಿಕೊಂಡು ಮುಂದುವರಿಯುವುದು ಇಂದಿನ ಯುವ ಪೀಡಿಗೆ ಬಹಳ ಮುಖ್ಯವಾದ ವಿಷಯವೆಂದು ಹೇಳುತ್ತಾ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಯುವ ಸಂಘದ ವತಿಯಿಂದ ಹಮ್ಮಿಕೊಂಡ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಆಕರ್ಷಿತ ಭಾಗವಾದ ಆಟಿ ಕಳಂಜೆ ನೃತ್ಯವನ್ನು ತ್ರಿಲೋಕ್ ಶೆಟ್ಟಿಗಾರ್ ಮತ್ತು ಕೇಶವ್ ವಿ. ಶೆಟ್ಟಿಗಾರ್ ಪ್ರದರ್ಶಿಸಿದರು.
ಪದ್ಮ ಶಾಲಿ ಸಮಾಜದ ಬಾಂಧವರು ತಮ್ಮ ಮನೆಗಳಲ್ಲಿ ತಯಾರಿಸಿದ ಸುಮಾರು 45 ಬಗೆಯ ವಿವಿಧ ಆಟಿಯ ಆಹಾರ, ತಿಂಡಿ-ತಿನಸುಗಳನ್ನು ತಂದು ಸಭಿಕರಿಗೆ ಉಣಬಡಿಸಿದರು. ಪದ್ಮಶಾಲಿ ಯುವ ಸಮಿತಿಯ ಅಧ್ಯಕ್ಷೆ ದಿವ್ಯಾ ಶೆಟ್ಟಿಗಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಹಾಗು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸರ್ವ ಸದಸ್ಯರಿಗೆ ಧನ್ಯವಾದಗಳನ್ನಿತ್ತರು.









