ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ “ಮಧುರಂ ಸ್ಮರಣಂ” ಕಾರ್ಯಕ್ರಮ
Views: 372
ಕನ್ನಡ ಕರಾವಳಿ ಸುದ್ದಿ: ವಕ್ವಾಡಿಯ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಜೀವನಕ್ಕೆ ಅನುಗುಣವಾಗಿ ‘ಮಧುರo ಸ್ಮರಣಂ’ ಎಂಬ ವಿನೂತನ ಕಾರ್ಯಕ್ರಮವನ್ನು ಮಾ.17 ರಂದು ಹಮ್ಮಿಕೊಳ್ಳಲಾಗಿತ್ತು.
ಬಾಂಡ್ಯ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಶ್ರೀಮತಿ ಅನುಪಮಾ ಎಸ್ ಶೆಟ್ಟಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಂಡು ಒಳ್ಳೆಯ ಚಿಂತನೆಗಳತ್ತ ಮುಖ ಮಾಡಬೇಕು. ಶಿಕ್ಷಣವನ್ನು ಪಡೆಯುವ ಸಂದರ್ಭದಲ್ಲಿ ಸೋಲುಗಳನ್ನು ಮೆಟ್ಟಿ ಗೆಲುವಿನ ಕಡೆಗೆ ಸಾಗಬೇಕು. ಸಾಧಕ ವಿದ್ಯಾರ್ಥಿಗಳೇ ಸಮಾಜಕ್ಕೆ ದೊಡ್ಡ ಆಸ್ತಿಯಾಗಬೇಕು ಎಂದರು.
ಪ್ರಾಂಶುಪಾಲರಾದ ಡಾ. ರೂಪಾ ಶೆಣೈ ರವರು ಪ್ರಾಸ್ತಾವಿಕ ವಾಗಿ ಮಾತನಾಡುತ್ತಾ, ನಮ್ಮ ಜೀವನವು ಬಹುದೊಡ್ಡ ಪ್ರಯಾಣ ಈ ಪ್ರಯಾಣದಲ್ಲಿ ಸಿಹಿಕಹಿ ನೆನಪುಗಳು ಸಹಜ. ಕಲಿಕೆಯ ಸಂದರ್ಭದಲ್ಲಿ ನಾವು ಸಂಪಾದಿಸಿದ ಧನಾತ್ಮಕ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಬೀಳ್ಕೊಡುಗೆ ಎನ್ನುವುದು ಸಿಹಿ ಘಳಿಗೆ. ನಿಮ್ಮೆಲ್ಲರ ಬದುಕು ಇಡೀ ಸಮಾಜವೇ ಗೌರವಿಸುವಂತಾಗಲಿ ಎಂದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಎರಡು ವರ್ಷದ ಶೈಕ್ಷಣಿಕ ಅನುಭವವನ್ನು ಬಿಚ್ಚಿಟ್ಟರು. ವಿದ್ಯಾರ್ಥಿಗಳು ಸುಮಾರು ಇಪ್ಪತ್ತು ಸಾವಿರ ಮೊತ್ತದ ಕ್ರೀಡೋಪಕರಣಗಳನ್ನು ಸಂಸ್ಥೆಗೆ ಕೊಡುಗೆಯಾಗಿ ನೀಡಿದರು. ಇಡೀ ಶೈಕ್ಷಣಿಕ ಅವಧಿಯಲ್ಲಿ ವಿವಿಧ ವಿಭಾಗಗಳಲ್ಲಿ ಸಾಧಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.
ವಿದ್ಯಾರ್ಥಿನಿ ವಿನಿಕ ವಿಜೇತರ ಪಟ್ಟಿಯನ್ನು ವಾಚಿಸಿದರು. ವಿದ್ಯಾರ್ಥಿ ಪೌರವ್ ಕಾರ್ಯಕ್ರಮವನ್ನು ನಿರೂಪಿಸಿದರೆ, ಕು. ಪ್ರಜನ್ಯ ಸ್ವಾಗತಿಸಿದರು. ಕು.ನಿತ್ಯ ವಂದಿಸಿದರು.






