3ನೇ ಬಾರಿಗೆ ನೀಟ್ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿನಿ ಆತ್ಮಹತ್ಯೆ
Views: 21
ಕನ್ನಡ ಕರಾವಳಿ ಸುದ್ದಿ:ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಮರು-ಪರೀಕ್ಷೆಯ ಗೊಂದಲಗಳ ನಡುವೆಯೇ ತಮಿಳುನಾಡಿನಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.
ಕೊಯಮತ್ತೂರು ಜಿಲ್ಲೆಯ 19 ವರ್ಷದ ನೀಟ್ ಆಕಾಂಕ್ಷಿಯೊಬ್ಬರು ತಮ್ಮ ಪ್ರಾಣವನ್ನೇ ಬಿಟ್ಟಿದ್ದಾರೆ. ಬೆನ್ನಲ್ಲೇ ತಮಿಳುನಾಡಿನಲ್ಲಿ ಮತ್ತೆ ನೀಟ್ ವಿರೋಧಿ ಕಿಚ್ಚು ಹತ್ತಿಕೊಂಡಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಅನುಕೀರ್ತನಾ ಎಂದು ಗುರುತಿಸಲಾಗಿದೆ.
ಈಕೆ ಈಗಾಗಲೇ ಎರಡು ಬಾರಿ ನೀಟ್ ಪರೀಕ್ಷೆ ಬರೆದಿದ್ದು, ಈ ವರ್ಷ ಮೂರನೇ ಬಾರಿಗೆ ಸಿದ್ಧತೆ ನಡೆಸುತ್ತಿದ್ದರು. ಇತ್ತೀಚಿನ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಮತ್ತು ಕೆಲವು ಅಭ್ಯರ್ಥಿಗಳಿಗೆ ಮರು-ಪರೀಕ್ಷೆ ನಡೆಸುವ ನಿರ್ಧಾರದಿಂದ ಆಕೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೆ ಪರೀಕ್ಷೆ ಬರೆಯಬೇಕಾದ ಅನಿವಾರ್ಯತೆ ಮತ್ತು ಪರೀಕ್ಷಾ ವ್ಯವಸ್ಥೆಯ ಮೇಲಿನ ಹತಾಶೆಯೇ ಈ ನಿರ್ಧಾರಕ್ಕೆ ಕಾರಣವಿರಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಕೊಯಮತ್ತೂರಿನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಆರಂಭವಾಗಿದೆ. ನೀಟ್ ರದ್ದುಪಡಿಸಿ ವಿರೋಧ ಘೋಷಣೆಗಳೊಂದಿಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಬೀದಿಗಿಳಿದಿದ್ದಾರೆ.






