ಯುವಜನ

ಅನೈತಿಕ ಸಂಬಂಧ ಶಂಕೆ…! ಗೆಳತಿಯನ್ನು ಬೆಂಕಿ ಹಚ್ಚಿ ಕೊಂದ ಲಿವಿಂಗ್‌-ಟುಗೆದರ್‌ ಗೆಳೆಯ

Views: 136

ಕನ್ನಡ ಕರಾವಳಿ ಸುದ್ದಿ:ಲಿವಿಂಗ್‌ ಟುಗೆದರ್‌ನಲ್ಲಿದ್ದ ಗೆಳತಿಯನ್ನು ಅನೈತಿಕ ಸಂಬಂಧದ ಶಂಕೆಯಿಂದ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಹುಳಿಮಾವು ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಳೆನಲ್ಲಸಂದ್ರದ ನಿವಾಸಿ ವನಜಾಕ್ಷಿ (26) ಕೊಲೆಯಾದ ಯುವತಿ.ವನಜಾಕ್ಷಿಗೆ ಕ್ಯಾಬ್‌ ಚಾಲಕ ವೃತ್ತಿ ಮಾಡುತ್ತಿದ್ದ ವಿಠ್ಠಲ್‌ (52) ಎಂಬಾತನ ಪರಿಚಯವಾಗಿದ್ದು, ನಂತರ ಅವರ ಮಧ್ಯೆ ಸ್ನೇಹವಾಗಿ ಪ್ರೀತಿಗೆ ತಿರುಗಿದೆ. ಕಳೆದ ಮೂರು ವರ್ಷಗಳಿಂದ ಇವರಿಬ್ಬರು ಲಿವಿಂಗ್‌ ಟು ಗೆದರ್‌ನಲ್ಲಿದ್ದರು.

ಈ ನಡುವೆ ವನಜಾಕ್ಷಿಗೆ ಬೇರೊಬ್ಬ ವ್ಯಕ್ತಿಯ ಜೊತೆ ಅನೈತಿಕ ಸಂಬಂಧ ಇರುವುದಾಗಿ ಅನುಮಾನಗೊಂಡು ಇತ್ತೀಚೆಗೆ ವನಜಾಕ್ಷಿ ಮನೆಯಿಂದ ಹೊರಗೆ ಹೋದಾಗ ವಿಠ್ಠಲ್‌ ಆಕೆಯನ್ನು ಹಿಂಭಾಲಿಸಿದ್ದಾನೆ. ಅದೇ ಸಮಯದಲ್ಲಿ ಬೇರೊಬ್ಬ ವ್ಯಕ್ತಿಯ ಜೊತೆ ಕಾರಿನಲ್ಲಿ ಹೋಗುತ್ತಿರುವುದನ್ನು ಗಮನಿಸಿದ್ದಾನೆ.

ಆಕೆಯ ವರ್ತನೆಯಿಂದ ಕೋಪಗೊಂಡು ತನ್ನ ಕ್ಯಾಬ್‌ನಲ್ಲಿ ಆ ಕಾರನ್ನು ಹಿಂಭಾಲಿಸಿಕೊಂಡು ಹೋಗಿದ್ದಾನೆ. ಮಾರ್ಗಮಧ್ಯೆ ಕಾರನ್ನು ತಡೆದು ನಿಲ್ಲಿಸಿ ವನಜಾಕ್ಷಿಯೊಂದಿಗೆ ವಿಠ್ಠಲ್‌ ಜಗಳವಾಡಿದ್ದಾನೆ.

ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ತಾಳ್ಮೆ ಕಳೆದುಕೊಂಡ ವಿಠ್ಠಲ್‌ ತನ್ನ ಕ್ಯಾಬ್‌ನಲ್ಲಿದ್ದ 5 ಲೀಟರ್‌ ಪೆಟ್ರೋಲ್‌ ಕ್ಯಾನ್‌ ತೆಗೆದುಕೊಂಡು ವನಜಾಕ್ಷಿ ಮೇಲೆ ಸುರಿಯಲು ಮುಂದಾಗಿದ್ದಾನೆ. ಇದರಿಂದ ಗಾಬರಿಗೊಂಡ ವನಜಾಕ್ಷಿ ಕಾರಿನಿಂದ ಇಳಿದು ತಪ್ಪಿಸಿಕೊಳ್ಳಲು ಓಡಿದ್ದಾಳೆ.ಆದರೂ ಬಿಡದ ವಿಠ್ಠಲ್‌ ಆಕೆಯನ್ನು ಅಟ್ಟಿಸಿಕೊಂಡು ಹೋಗಿ ಆಕೆಯ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾನೆ.

ತೀವ್ರ ಸುಟ್ಟ ಗಾಯಗಳಿಂದ ಗಂಭೀರಗೊಂಡಿದ್ದ ವನಜಾಕ್ಷಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಮುಂಜಾನೆ ಆಕೆ ಮೃತಪಟ್ಟಿದ್ದಾಳೆ.ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹುಳಿಮಾವು ಠಾಣೆ ಪೊಲೀಸರು ಆರೋಪಿ ವಿಠ್ಠಲ್‌ನನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

Related Articles

Back to top button