ಪ್ರೇಮ ಸಂಬಂಧ ನಿರಾಕರಣೆ: ಅಪ್ರಾಪ್ತ ಭಗ್ನ ಪ್ರೇಮಿಯೊಬ್ಬ 10ನೇ ತರಗತಿಯ ವಿದ್ಯಾರ್ಥಿನಿ ಹತ್ಯೆ

Views: 94
ಕನ್ನಡ ಕರಾವಳಿ ಸುದ್ದಿ: ಅಪ್ರಾಪ್ತ ವಯಸ್ಸಿನ ಭಗ್ನಪ್ರೇಮಿಯೊಬ್ಬ ಪ್ರೇಮಸಂಬಂಧ ನಿರಾಕರಿಸಿದ 10ನೇ ತರಗತಿ ವಿದ್ಯಾರ್ಥಿನಿಯನ್ನು ಹತ್ಯೆ ಮಾಡಿದ ಪ್ರಕರಣ ನಾಗಪುರದಲ್ಲಿ ನಡೆದಿದೆ.
ಇನ್ನು ಮೂರು ತಿಂಗಳಲ್ಲಿ ವಯಸ್ಕನಾಗುವ ಆರೋಪಿ, ತನ್ನ ಮಾಜಿ ಪ್ರೇಯಸಿಯನ್ನು ಹತ್ಯೆ ಮಾಡಿದರೂ, ಕಾನೂನು ಪ್ರಕಾರ ಅಪ್ರಾಪ್ತ ವಯಸ್ಸಿನ ಕಾರಣಕ್ಕೆ ಪ್ರಯೋಜನ ಪಡೆಯಲಿದ್ದಾನೆ. ಆರೋಪಿ ಪ್ರಬುದ್ಧನಾಗಿದ್ದು, ಆತನನ್ನು ವಿಚಾರಣೆ ಸಂದರ್ಭದಲ್ಲಿ ವಯಸ್ಕ ಎಂದು ಪರಿಗಣಿಸಲು ಅವಕಾಶ ನೀಡುವಂತೆ ಬಾಲನ್ಯಾಯ ಮಂಡಳಿಗೆ ಮನವಿ ಮಾಡಲಾಗಿದೆ ಎಂದು ಡಿಸಿಪಿ ರಶ್ಮಿತಾ ರಾವ್ ಹೇಳಿದ್ದಾರೆ.
ವಿದ್ಯಾರ್ಥಿನಿ ಯಾವಾಗ ಆನ್ಲೈನ್ ನಲ್ಲಿ ಇರುತ್ತಾಳೆ ಹಾಗೂ ಯಾವಾಗ ಆಫ್ ಲೈನ್ ಆಗುತ್ತಾಳೆ ಎಂಬುದನ್ನು ಗಮನಿಸುವ ಮೂಲಕ ಅನುಕೂಲಕರ ಸಮಯ ಮತ್ತು ಸ್ಥಳದಲ್ಲಿ ದಾಳಿ ಮಾಡಲು ಸಂಚು ರೂಪಿಸಿದ್ದ. ಫೋನ್ ನಲ್ಲಿ ಇಬ್ಬರೂ ಪರಸ್ಪರ ಬೈದಾಡಿಕೊಂಡಿದ್ದರು. ವಿದ್ಯಾರ್ಥಿನಿಯ ಸಂಭಾಷಣೆಯ ತುಣುಕುಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆಸ್ಪತ್ರೆಯಲ್ಲಿ ಅರೆಕಾಲಿಕ ಕೇರ್ ಟೇಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಈತ ಕೆಲ ತಿಂಗಳ ಹಿಂದೆ ಬಾಲಕಿಗೆ ಜೀವ ಬೆದರಿಕೆ ಹಾಕಿದ್ದ. ಈ ಬಗ್ಗೆ ತಾಯಿ ಹಾಗೂ ಅಕ್ಕ ಅಜ್ಜಿ ಪೊಲೀಸ್ ಠಾಣೆಗೆ ಮೇ ತಿಂಗಳಲ್ಲಿ ದೂರು ನೀಡಿದ್ದರು. ಈ ವಿವಾದವನ್ನು ರಾಜಿಯಲ್ಲಿ ಇತ್ಯರ್ಥಪಡಿಸುವ ಪ್ರಯತ್ನವನ್ನೂ ಪೊಲೀಸರು ಮಾಡಿದ್ದರು. ಆರೋಪಿಯನ್ನು ಠಾಣೆಗೆ ಕರೆಸಿ ಎಚ್ಚರಿಕೆಯನ್ನೂ ನೀಡಲಾಗಿತ್ತು. ಆದರೆ ಪೊಲೀಸ್ ಸಿಬ್ಬಂದಿ ಹಿರಿಯ ಅಧಿಕಾರಿಗಳ ಗಮನಕ್ಕೆ ಈ ಪ್ರಕರಣ ತಂದಿರಲಿಲ್ಲ ಎನ್ನಲಾಗಿದೆ
.