ಸಾಮಾಜಿಕ

ಪ್ರೀತಿಸಿದ ಪ್ರಿಯಕರನಿಂದ ಮೋಸ: ಪುತ್ರಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ, ನೊಂದ ತಾಯಿ ನೇಣಿಗೆ ಶರಣು

Views: 130

ಕನ್ನಡ ಕರಾವಳಿ ಸುದ್ದಿ: ಮಂಡ್ಯದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಪ್ರಿಯಕರ ಮೋಸ ಮಾಡಿದ್ದರಿಂದ ನೊಂದ ಯುವತಿಯೊಬ್ಬಳು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪುತ್ರಿಯ ಆತ್ಮಹತ್ಯೆಯಿಂದ ಮನನೊಂದು ತಾಯಿ ಸಹ ನೇಣಿಗೆ ಶರಣಾಗಿದ್ದಾರೆ. ಈ ದಾರುಣ ಘಟನೆ ಮಂಡ್ಯ ತಾಲೂಕಿನ ಹೆಬ್ಬಕವಾಡಿ ಗ್ರಾಮದಲ್ಲಿ ನಡೆದಿದೆ. ವಿಜಯಲಕ್ಷ್ಮಿ ಹಾಗೂ ಆಕೆಯ ತಾಯಿ ಲಕ್ಷ್ಮಿ (50) ಮೃತಪಟ್ಟವರು.

25 ದಿನಗಳ ಹಿಂದೆ ಲಕ್ಷ್ಮಿ ಅವರ ಪುತ್ರಿ ವಿಜಯಲಕ್ಷ್ಮಿ (21) ಆತ್ಮಹತ್ಯೆ ಮಾಡಿಕೊಂಡಿದ್ದಳು. ಫೆಬ್ರವರಿ 21ರಂದು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಳು.

ಈಕೆಗೆ ಪಕ್ಕದ ಮಾರಸಿಂಗನಹಳ್ಳಿ ನಿವಾಸಿ ಹರಿಕೃಷ್ಣ ಎಂಬಾತ ಮೋಸ ಮಾಡಿದ್ದ ಎಂಬ ಆರೋಪ ಕೇಳಿಬಂದಿತ್ತು. ಒಂದುವರೆ ವರ್ಷದಿಂದ ವಿಜಯಲಕ್ಷ್ಮಿ ಮತ್ತು ಹರಿಕೃಷ್ಣ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಬೇರೆ ಹುಡುಗಿಯರ ಜೊತೆ ಹರಿಕೃಷ್ಣ ಸಂಪರ್ಕದಲ್ಲಿ ಇದ್ದ. ಈ ಬಗ್ಗೆ ಪ್ರಶ್ನಿಸಿ ಯುವತಿ ವಿಜಯಲಕ್ಷ್ಮಿ ಮದುವೆಗೆ ಪಟ್ಟು ಹಿಡಿದಿದ್ದಾಳೆ. ಮದುವೆಗೆ ನಿರಾಕರಿಸಿ ಹರಿಕೃಷ್ಣ, ವಿಜಯಲಕ್ಷ್ಮಿಯನ್ನು ಆವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಇದರಿಂದ ಮನನೊಂದು ವಿಜಯಲಕ್ಷ್ಮಿ ಆತ್ಮಹತ್ಯೆಗೆ ಶರಣಾಗಿದ್ದಳು.

ಈ ಕುರಿತು ವಿಜಯಲಕ್ಷ್ಮಿ ತಂದೆ ಮಂಡ್ಯ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ನ್ಯಾಯ ಕೇಳಲು ಹೋದವರ ವಿರುದ್ಧವೇ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ ಎಂದು ಆರೋಪ ವ್ಯಕ್ತವಾಗಿತ್ತು. ಮಗಳ ಸಾವಿಗೆ ನ್ಯಾಯ ಸಿಕ್ಕಿಲ್ಲವೆಂದು ಮನನೊಂದು ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಲಕ್ಷ್ಮಿ ಶವ ಸಾಗಿಸಲು ಬಿಡದೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಆರೋಪಿ ಹರಿಕೃಷ್ಣ ಮತ್ತು ಕುಟುಂಬದವರನ್ನು ಬಂಧಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button