ಡಿ.7 ಮತ್ತು 8 ರಂದು ಕಾಳಾವರ ಚಂಪಾಷಷ್ಠಿ ಮಹೋತ್ಸವ – ಆಹ್ವಾನ ಪತ್ರಿಕೆ ಬಿಡುಗಡೆ – ಉತ್ಸವ ಸಮಿತಿ ರಚನೆ
Views: 243
ಕುಂದಾಪುರ :ಎರಡನೇ ಸುಬ್ರಹ್ಮಣ್ಯ ಕ್ಷೇತ್ರ ಎಂದೇ ಖ್ಯಾತವಾದ ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಕಾಳಿಂಗ (ಸುಬ್ರಹ್ಮಣ್ಯ) ದೇವಾಲಯದಲ್ಲಿ ಡಿ.7 ಮತ್ತು 8 ರಂದು ಚಂಪಾಷಷ್ಠಿ ಮಹೋತ್ಸವ ನಡೆಯಲಿದೆ.
ಷಷ್ಠಿ ಮಹೋತ್ಸವದ ಅಂಗವಾಗಿ ಆಹ್ವಾನ ಪತ್ರಿಕೆ ಬಿಡುಗಡೆ, ಪೂರ್ವಭಾವಿ ಸಮಾಲೋಚನಾ ಸಭೆ, ಉತ್ಸವ ಸಮಿತಿ ರಚಿಸಲಾಯಿತು.
ಊರ ದೇವಾಲಯಗಳ ಉತ್ಸವ, ಜಾತ್ರೆಗಳಲ್ಲಿ ಊರಿನ ಜನತೆ ಪಾಲ್ಗೊಳ್ಳದಿದ್ದರೆ ಅದು ಯಶಸ್ವಿಯಾಗುವುದಿಲ್ಲ. ಹಾಗೆಯೇ ಊರವರ ಸಹಕಾರವಿಲ್ಲದಿದ್ದರೂ ಜಾತ್ರೆ ನಡೆಸಲಾಗದು. ಕರಾವಳಿಯ ಪ್ರಸಿದ್ಧ ಕ್ಷೇತ್ರವಾದ ಕಾಳಾವರದ ಷಷ್ಠಿ ಮಹೋತ್ಸವದ ಯಶಸ್ಸಿಗೆ ಕಾಳಾವರ ಹಾಗೂ ಪರಿಸರದ ಗ್ರಾಮಸ್ಥರು ಸಹಕರಿಸಬೇಕು. ಜೊತೆಗೆ ಇಲಾಖೆಯ ಬೆಂಬಲ ಇರುತ್ತದೆ. ಇನ್ನೂ ನೂತನ ವ್ಯವಸ್ಥಾಪನಾ ಸಮಿತಿ ನಿರ್ಮಾಣಗೊಳ್ಳದ ಕಾಳಾವರ ದೇವಾಲಯದಲ್ಲಿ ಹಿಂದಿನ ಸಮಿತಿಯವರೇ ಉಸ್ತುವಾರಿ ವಹಿಸಿ ಉತ್ಸವಗಳನ್ನು ನಡೆಸಬೇಕಾಗಿದೆ – ಎಂದು ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಕಾಳಿಂಗ (ಸುಬ್ರಹ್ಮಣ್ಯ) ದೇವಾಲಯದ ಆಡಳಿತಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ಉಮೇಶ್ ಕೋಟ್ಯಾನ್ ಹೇಳಿದರು.
ಚಂಪಾಷಷ್ಠಿ ಮಹೋತ್ಸವದ ಆಹ್ವಾನ ಪತ್ರಿಕೆಯನ್ನು ದೇವಾಲಯದಲ್ಲಿ ನಡೆದ ಉತ್ಸವ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪ್ರಾಸ್ತಾವಿಕ ಮಾತನಾಡಿದ ದೇವಳ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಚಂದ್ರಶೇಖರ ಹೆಗ್ಡೆ, ಹೊಸ ಸಮಿತಿ ರಚನೆಗೊಳ್ಳದ ಹಿನ್ನೆಲೆಯಲ್ಲಿ ಮಾಜಿ ಸಮಿತಿಗೆ ಜವಾಬ್ದಾರಿ ಹೆಚ್ಚಿದೆ. ಈ ಹಿಂದಿನಂತೆಯೇ ಕಾಳಾವರ, ಅಸೋಡು, ವಕ್ವಾಡಿ ಗ್ರಾಮಸ್ಥರು, ಎಲ್ಲಾ ಸಂಘ – ಸಂಸ್ಥೆಗಳವರು ಸಹಕಾರ ನೀಡಿ ಷಷ್ಠಿ ಉತ್ಸವಗಳನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಎರಡನೇ ಸುಬ್ರಹ್ಮಣ್ಯ ಕ್ಷೇತ್ರ ಎಂದೇ ಖ್ಯಾತವಾದ ಕಾಳಾವರ ಕ್ಷೇತ್ರದ ಹಿರಿ ಮತ್ತು ಕಿರಿ ಷಷ್ಠಿ ಉತ್ಸವಗಳಿಗೆ ತುಂಬಾ ಮಹತ್ವವಿದೆ. ಎಲ್ಲಿಯೂ ಲೋಪದೋಷಗಳಾಗದಂತೆ ಉತ್ಸವ ನಡೆಸುವ ಹೊಣೆ ನಮ್ಮೆಲ್ಲರ ಮೇಲಿದೆ. ಆಡಳಿತಾಧಿಕಾರಿಗಳೂ ಇಲಾಖಾ ಸಹಕಾರ ನೀಡಬೇಕು ಎಂದು ಅವರು ಕೇಳಿಕೊಂಡರು.
ಉತ್ಸವಗಳು ಸಾಂಗವಾಗಿ ನೆರವೇರಲು ಉತ್ಸವ ಸಮಿತಿ ಹಾಗೂ ಉಪ ಸಮಿತಿಗಳನ್ನು ರಚಿಸಲಾಯಿತು. ಈ ಹಿಂದಿನ ಸಮಿತಿಯ ಸದಸ್ಯರುಗಳಾದ ಅರ್ಚಕ ಸತ್ಯನಾರಾಯಣ ಪುರಾಣಿಕ, ಮಹೇಶ್, ಭರತ್ ಕುಮಾರ್ ಶೆಟ್ಟಿ, ರಂಜಿತ್ ಕುಮಾರ್ ಶೆಟ್ಟಿ, ಚಂದ್ರ ಪೂಜಾರಿ, ಅಶೋಕ್ ಶೆಟ್ಟಿ, ಲಲಿತಾ, ಶ್ರೀಲತಾ, ಮ್ಯಾನೇಜರ್ ಶ್ರೀನಾಥ್ ಉಪಸ್ಥಿತರಿದ್ದರು. ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಳ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ, ಗ್ರಾಮ ಪಂಚಾಯತ್ ಸದಸ್ಯರುಗಳು, ವಿವಿಧ ಇಲಾಖೆಗಳವರು ಸಲಹೆ ಸೂಚನೆಗಳನ್ನು ನೀಡಿದರು. ಭಕ್ತ ಸಂದಣಿ ನೆರೆದಾಗ ನುಕೂನುಗ್ಗಲಾಗದಂತೆ, ಬಿಸಿಲಿನಿಂದ ಬಸವಳಿಯದಂತೆ, ನೈರ್ಮಲ್ಯ, ಆರೋಗ್ಯ, ಕುಡಿವ ನೀರು, ಭೋಜನ ಪ್ರಸಾದ ವಿತರಣೆ, ಹಣ್ಣು – ಕಾಯಿ, ಹೂವು – ಕಾಯಿ, ತುಲಾಭಾರ ಸೇವೆಗಳಲ್ಲಿ ವ್ಯತ್ಯಯವಾಗದಂತೆ ಉಸ್ತುವಾರಿ ಸಮಿತಿಗಳವರು, ಸ್ವಯಂ ಸೇವಕರು ಕಾರ್ಯಾಚರಿಸಬೇಕು ಎಂದು ತೀರ್ಮಾನಿಸಲಾಯಿತು.
ದೇವಳ ಜೀರ್ಣೋದ್ದಾರ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ಆಹರ್ನಿಷಿ ಶ್ರಮಿಸಿದ್ದ, ಇತ್ತೀಚಿಗೆ ಅಗಲಿದ ತಾಲೂಕು ಪಂಚಾಯತ್ ಮಾಜಿ ಸದಸ್ಯ ದೀಪಕ್ ಕುಮಾರ್ ಶೆಟ್ಟಿಯವರಿಗೆ ಆರಂಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರೊ.ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿ, ಅಗತ್ಯ ಸಲಹೆ – ಸೂಚನೆಗಳನ್ನು ನೀಡಿದರು.