ಅಭಿವೃದ್ಧಿಯ ಪಥದಲ್ಲಿ ಶ್ರೀ ಕ್ಷೇತ್ರ ಆನೆಗುಡ್ಡೆ ಶ್ರೀ ವಿನಾಯಕ ದೇವಳದಲ್ಲಿ ಇಂದು ವೈಭವದ ಗಣೇಶ ಚತುರ್ಥಿ

Views: 310
ಕುಂದಾಪುರ : ಕರ್ನಾಟಕ ಕರಾವಳಿಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲೊಂದಾದ ಕುಂಭಾಸಿಯ ಆನೆಗುಡ್ಡೆ ಶ್ರೀ ವಿನಾಯಕ ದೇವಳದಲ್ಲಿ ವೈಭವದ ಶ್ರೀ ಗಣೇಶ ಚತುರ್ಥಿಯ ಆಚರಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ದೇಶ – ವಿದೇಶಗಳಿಂದ ಭಕ್ತರನ್ನು ಆಕರ್ಷಸುತ್ತಿರುವ ಆನೆಗುಡ್ಡೆ ಕ್ಷೇತ್ರ ದಿನದಿನವೂ ಅಭಿವೃದ್ಧಿ ಹೊಂದುತ್ತಿದೆ. ಅಂತೆಯೇ ಭಕ್ತರ ಸಂಖ್ಯೆ ಹೆಚ್ಚಿದಂತೆಲ್ಲಾ ಅವರ ಅನುಕೂಲಗಳಿಗಾಗಿ ಕ್ಷೇತ್ರದಲ್ಲಿ ವ್ಯವಸ್ಥೆಗಳನ್ನೂ ಕಲ್ಪಿಸಲಾಗುತ್ತಿದೆ. ಕೆ. ಶ್ರೀರಮಣ ಉಪಾಧ್ಯಾಯರ ನೇತೃತ್ವದ ಅನುವಂಶಿಕ ಆಡಳಿತ ಮಂಡಳಿ ಭಕ್ತರ ಅನುಕೂಲತೆ ಮತ್ತು ಕ್ಷೇತ್ರದ ಸುರಕ್ಷತೆಗಾಗಿ ಎಲ್ಲ ಕ್ರಮಗಳನ್ನು ಕೈಗೊಂಡಿದೆ.
ದೇವಾಲಯ ಮತ್ತು ಭಕ್ತರ ಸುರಕ್ಷಾ ದೃಷ್ಟಿಯಿಂದ ಗುಪ್ತಚರ ವಿಭಾಗದ ಸೂಚನೆಯ ಮೇರೆಗೆ ಇದೀಗ ಮೊದಲಿನಂತೆ ದೇವಸ್ಥಾನದ ಅತಿ ಸಮೀಪಕ್ಕೆ ಯಾವ ವಾಹನಗಳನ್ನೂ ಬಿಡುತ್ತಿಲ್ಲ. ವಾಹನಗಳ ನಿಲುಗಡೆಗಾಗಿಯೇ ದೇವಳದ ಉತ್ತರ ದಿಕ್ಕಿನಲ್ಲಿ ಸುಸಜ್ಜಿತವಾದ ವಾಹನ ತಂಗುದಾಣ ನಿರ್ಮಿಸಲಾಗಿದೆ. ರಾತ್ರಿ ವೇಳೆ ಭದ್ರತಾ ಸಿಬ್ಬಂದಿಗಳ ಕಾರ್ಯಚಾರಣೆ ಮತ್ತು ಎಲ್ಲೆಡೆ ಸೂಕ್ಷ್ಮ ಸಿ ಸಿ ಟಿವಿ ಕಣ್ಗಾವಲು ಏರ್ಪಡಿಸಲಾಗಿದೆ ಎಂದು ಶ್ರೀ ರಮಣ ಉಪಾಧ್ಯಾಯರು ತಿಳಿಸಿದ್ದಾರೆ.

ದೇವಳದ ಪೂರ್ವಭಾಗದಲ್ಲಿನ ವಕ್ವಾಡಿ ಗ್ರಾಮದಲ್ಲಿನ ದೊಡ್ಡ ತೆರೆದ ಬಾವಿಯಿಂದ ಕ್ಷೇತ್ರಕ್ಕೆ ಅಗತ್ಯ ನೀರು ಪೂರೈಕೆಯಾಗುತ್ತಿದೆ. ಇದು ಗುಡ್ಡದ ಮೇಲಿನ ಪ್ರದೇಶವಾದ್ದರಿಂದ ಇಲ್ಲಿ ನೀರಿಗೆ ಸಮಸ್ಯೆಯಿತ್ತು. ದಾನಿಗಳ ನೆರವಿನಿಂದ ಇದೀಗ ಆ ಸಮಸ್ಯೆ ನಿವಾರಣೆಯಗಿದೆ. ಅಂತೆಯೇ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳೂ ವೇಗ ಪಡೆದಿವೆ.
ಶ್ರೀ ವಿನಾಯಕನ ನಿತ್ಯ ಪಂಚಾಮೃತ ವಿನಿಯೋಗಕ್ಕಾಗಿ ಗೋಕುಟೀರ ಈಗಾಗಲೇ ಉದ್ಘಾಟನೆಗೊಂಡಿದೆ. ಜೊತೆಗೆ ಯಾಗ, ಹೋಮಗಳಿಗಾಗಿ ಕಟ್ಟಿಗೆ ಸಂಗ್ರಹಾಗಾರವನ್ನು ಸುಮಾರು 17 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.ಗರ್ಭಗುಡಿಯಲ್ಲಿ ಶಿಲಾಚ್ಚಾದನೆ ಮಾಡಲಾಗಿದೆ.

ಪ್ರಸಾದ ತಯಾರಿಕೆ ಮತ್ತು ವಿಶೇಷ ಸೇವಾಕರ್ತರ ಪ್ರಸಾದ ವಿತರಣೆ ಮತ್ತು ಹುಂಡಿ ಎಣಿಕೆ ಕಾರ್ಯಗಳಿಗಾಗಿ ದೇವಳದ ಪೂರ್ವ ಭಾಗದಲ್ಲಿ 3.60 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಮುಂಬರುವ ವಾರ್ಷಿಕ ರಥೋತ್ಸವದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಈಗಾಗಲೇ ದೇವಳ ಪ್ರವೇಶ ದ್ವಾರ ಮತ್ತು ವಸಂತ ಮಂಟಪಗಳನ್ನು ಸುಮಾರು 1.30 ಕೋಟಿ ವೆಚ್ಚಚದಲ್ಲಿ ದಾರು ಶಿಲ್ಪ ಕೆತ್ತನೆಗಳಿಂದ ಅಲಂಕರಿಸಲಾಗಿದ್ದು, ಎರಡನೇ ಹಂತದ ದಾರು ಶಿಲ್ಪ ಕಾರ್ಯವನ್ನು ಶೀಘ್ರ ಕೈಗೆತ್ತಿಕೊಳ್ಳಲಾಗುವುದು.
ಭಕ್ತರ ಸರ್ವಾಭೀಷ್ಟ ಸಿದ್ಧಿದಾಯಕ ಎಂದೇ ಖ್ಯಾತನಾದ ಆನೆಗುಡ್ಡೆ ವಿನಾಯಕನ ಶ್ರೀ ಕ್ಷೇತ್ರದಲ್ಲಿ ದಿನದಿನವೂ ಭಕ್ತರು, ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಎಲ್ಲರಿಗೂ ಇಲ್ಲಿ ಸಮಾಧಾನವಾಗುವಂತೆ, ಸ್ವಾದಿಷ್ಟ ಪ್ರಸಾದ ಭೋಜನ ಸಿಗುವಂತೆ ಆಡಳಿತ ಸಮಿತಿಯು ವ್ಯವಸ್ಥೆ ಮಾಡಿದೆ. ದಾನಿಗಳೂ ನೆರವು ನೀಡುತ್ತಿದ್ದಾರೆ. ಕೆ. ಶ್ರೀರಮಣ ಉಪಾಧ್ಯಾಯರು ಅನುವಂಶಿಕ ಆಡಳಿತ ಧರ್ಮದರ್ಶಿಗಳಾಗಿರುವ ಅನುವಂಶಿಕ ಧರ್ಮದರ್ಶಿ ಮಂಡಳಿಯಲ್ಲಿ ಕೆ. ನಿರಂಜನ ಉಪಾಧ್ಯಾಯ ಮತ್ತು ಕೆ. ಪದ್ಮನಾಭ ಉಪಾಧ್ಯಯರು ಅನುವಂಶಿಕ ಜೊತೆ ಧರ್ಮದರ್ಶಿಗಳಾಗಿದ್ದು ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಹಿರಿಯ ವಿಶ್ರಾಂತ ಅನುವಂಶಿಕ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯರು ಅಗತ್ಯ ಮಾರ್ಗದರ್ಶನ ನೀಡುತ್ತಿದ್ದಾರೆ. ಶ್ರೀ ಮಧ್ವಾಚಾರ್ಯರ ವೈಷ್ಣವ ಮತದ ಅನುಯಾಯಿಗಳಾದ ಉಪಾಧ್ಯಾಯ ಕುಟುಂಬದ ಮೂಲ ಪುರುಷರಾದ ವಿಶ್ವೇಶ್ವರ ಉಪಾಧ್ಯಾಯ ವಂಶಸ್ಥರು ವಂಶಪಾರಂಪರ್ಯವಾಗಿ ಏಳು ತಲೆಮಾರುಗಳಿಂದ ಶ್ರೀ ವಿನಾಯಕನ ಪೂಜಾ ಕೈಂಕರ್ಯ ನಡೆಸುತ್ತಾ ಬಂದಿದ್ದಾರೆ. ಪ್ರಸ್ತುತದಲ್ಲಿ ಪರ್ಯಾಯ ಅರ್ಚಕ ಕೆ. ಕೃಷ್ಣಾನಂದ ಉಪಾಧ್ಯಾಯ ಮತ್ತು ಸಹೋದರರು ಹಾಗೂ ಸಹ ಅರ್ಚಕರ ತಂಡ ಪೂಜಾ ಕೈಂಕರ್ಯಗಳನ್ನು ನಡೆಸುತ್ತಿದೆ.
ದೇವಾಲಯವನ್ನು ವೈವಿಧ್ಯಮಯ ಹೂವುಗಳು ಮತ್ತು ವರ್ಣರಂಜಿತ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ಶ್ರೀ ವಿನಾಯಕ ಚತುರ್ಥಿಯ ಇಂದು
ಬ್ರಾಹ್ಮೀ ಮುಹೂರ್ತದಲ್ಲಿ ನಿರ್ಮಾಲ್ಯ ವಿಸರ್ಜನೆ ಪೂಜೆ, ಮಧ್ಯಾಹ್ನ ಪಂಚಾಮೃತ ಸಹಿತ ಉಪನಿಷತ್ ಕಲಶಾಭಿಷೇಕ, ಲೋಕ ಕಲ್ಯಾಣಾರ್ಥವಾಗಿ ಅಷ್ಟೋತ್ತರ ಸಹಸ್ರ ನಾರಿಕೇಳ ಗಣಯಾಗ, ಸತ್ಯಗಣಪತಿ ವ್ರತ ಸಹಿತ ಮಹಾಪೂಜೆ, ಮೂಡುಗಣಪತಿ, ಅಷ್ಟೋತ್ತರ ಸೇವೆ ಹಾಗೂ ವಿಶೇಷವಾಗಿ ಕಡುಬಿನ ಸೇವೆಗಳು ನಡೆಯಲಿವೆ.
ಮಹಾ ರಂಗಪೂಜೆಯ ನಂತರ ರಾತ್ರಿ ಸುವರ್ಣ ಪಲ್ಲಕ್ಕಿಯಲ್ಲಿ ಶ್ರೀ ದೇವರ ಸ್ವರ್ಣ ಉತ್ಸವ ಮೂರ್ತಿಯನ್ನು ರಜತ ಓಲಗ ಮಂಟಪದಲ್ಲಿ ಪೂಜಿಸಿ ಅಷ್ಟಾವಧಾನ ಸೇವೆಯ ನಂತರ ಉತ್ಸವ ಸಮಾಪಾನಗೊಳ್ಳುವುದು.
ಸಾಂಸ್ಕೃತಿಕ ಕಾರ್ಯಕ್ರಮಗಳು: ಚತುರ್ಥಿಯ ಹಿಂದಿನ ದಿನ ಶುಕ್ರವಾರದಂದೇ ಬೆಳಿಗ್ಗೆಯಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಂಡಿವೆ.

ಸೆ.7ರ ಶನಿವಾರ ಶ್ರೀ ಗಣೇಶ ಚತುರ್ಥಿಯ ಇಂದು ಸಂಜೆ 4 ರಿಂದ 6 ಗಂಟೆಯ ತನಕ ಹಿಂದೂಸ್ತಾನಿ ಗಾಯಕ ಪ್ರದೀಪ್ ಕುಕ್ಕಡೆ ಮತ್ತು ಬಳಗ(ಸಪ್ತಸ್ವರ ಸಂಗೀತ ಬಳಗ) ಕುಕ್ಕುಡೆ) ಅವರಿಂದ ದಾಸ ಸಾಹಿತ್ಯ ಹಾಗೂ ಸುಗಮ ಸಂಗೀತ, ಸಂಜೆ 6 ಗಂಟೆಯಿಂದ 8ರ ತನಕ ಯಕ್ಷತರಂಗ
ವ್ಯವಸಾಯಿ ಯಕ್ಷ ತಂಡ ಕೋಟ ಅವರಿಂದ ಯಕ್ಷಗಾನ”ಕೃಷ್ಣಾರ್ಜುನ”, ರಾತ್ರಿ 10 ಗಂಟೆಯಿಂದ ಶ್ರೀ ದಶಾವತಾರ ಸೇವೆಯಾಟ (ವಿವಿಧ ಕಲಾವಿದರ ಕೂಡುವಿಕೆಯಿಂದ) “ದಕ್ಷಯಜ್ಞ” ಯಕ್ಷಗಾನ ಬಯಲಾಟ ನಡೆಯಲಿದೆ.
ಶ್ರೀ ಗಣೇಶ ಚತುರ್ಥಿಯ ದಿನ ಶ್ರೀ ವಿನಾಯಕನಿಗೆ ಸಮರ್ಪಿಸಿದ ಮೋದಕ ಸಹಿತ ವಿವಿಧ ಭಕ್ಷ್ಯಗಳು, ಪಂಚಕಜ್ಜಾಯ ಹಾಗೂ ಹೂವು ಪ್ರಸಾದಗಳನ್ನು ಮುಂಜಾನೆ ಆರು ಗಂಟೆಯಿಂದ ಪರ್ಯಾಯ ಅರ್ಚಕರು ಭಕ್ತಾದಿಗಳಿಗೆ ವಿತರಿಸುತ್ತಾರೆ. ಗಣೇಶ ಚತುರ್ಥಿಯ ದಿನ ವಾಹನ ಪೂಜೆ, ಸತ್ಯನಾರಾಯಣ ಪೂಜೆಗಳು ಇರುವುದಿಲ್ಲ.
—ಕೆ.ಜಿ.ವೈದ್ಯ. ಹಿರಿಯ ಪತ್ರಕರ್ತರು, ಕೋಟೇಶ್ವರ






