ಗ್ಯಾರಂಟಿಗಳಿಗೆ ಬ್ರೇಕ್ ಬೀಳುತ್ತಾ? ಡೆಲ್ಲಿಗೆ ತಲುಪಿದ ಗ್ಯಾರಂಟಿ ಗೊಂದಲ? ಸಚಿವರು ಹೇಳಿದ್ದೇನು!?

Views: 101
ಬೆಂಗಳೂರು:ಐದು ಗ್ಯಾರಂಟಿಗಳು ಸಿದ್ದರಾಮಯ್ಯ ಸರ್ಕಾರದ ಜನಪ್ರಿಯತೆ ತಂದುಕೊಟ್ಟಿದೆ. ಇದೀಗ ಬಹುಪಾಲು ಗ್ಯಾರಂಟಿ ಫಲಾನುಭವಿಗಳನ್ನು ಆತಂಕಕ್ಕೆ ದೂಡಿದೆ. ಗ್ಯಾರಂಟಿಗಳಿಗೆ ಬ್ರೇಕ್ ಬೀಳುತ್ತಾ? ಗ್ಯಾರಂಟಿಗಳು ಮುಂದುವರೀತಾವಾ? ಇಂಥದ್ದೊಂದು ಡೌಟ್ ಎದ್ದಿದೆ. ಕಾರಣ.. ಖುದ್ದು ಸಿದ್ದು ಸಂಪುಟ ಸದಸ್ಯರ ನಡುವಿನ ಚರ್ಚೆ ಶುರುವಾಗಿದೆ.
ಐದು ಗ್ಯಾರಂಟಿಗಳು ಇನ್ಮುಂದೆ ಇರ್ತಾವಾ? ಇರಲ್ವಾ? ಅನ್ನೋ ಗೊಂದಲಕ್ಕೆ ಕಾರಣ ಡೆಲ್ಲಿಗೆ ತಲುಪಿರುವ ಸಂದೇಶ ಎನ್ನಲಾಗುತ್ತಿದೆ. ಇದೇ ಆಗಸ್ಟ್ 13ನೇ ತಾರೀಕು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಡೆಲ್ಲಿಯಲ್ಲಿ ಕಾಣಿಸಿಕೊಂಡ್ರು. ಅವರೊಂದಿಗೆ ಸಚಿವ ಕೆ.ಹೆಚ್ ಮುನಿಯಪ್ಪ ಕೂಡ ಹಾಜರಿದ್ರು. ಹೈಕಮಾಂಡ್ ಆಹ್ವಾನದ ಮೇರೆಗೆ ಪಿಸಿಸಿ ಅಧ್ಯಕ್ಷರು ಹಾಗೂ ಎಐಸಿಸಿ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಭಾಗವಹಿಸಿದ್ರು. ಇಂಥದ್ದೊಂದು ಸಭೆಯಲ್ಲೇ ಗ್ಯಾರಂಟಿಗಳ ವಿಚಾರದ ಗೊಂದಲವೊಂದನ್ನು ಹೈಕಮಾಂಡ್ ಗಮನಕ್ಕೆ ತರಲಾಯಿತು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸಮ್ಮುಖದಲ್ಲೇ ಗ್ಯಾರಂಟಿ ಗೊಂದಲಗಳ ವಿಚಾರವನ್ನು ಗಮನಕ್ಕೆ ತರಲಾಯಿತು. ಇದೇ ವಿಚಾರಕ್ಕೆ ಖುದ್ದು ಸಿದ್ದು ಸಂಪುಟ ಸದಸ್ಯ ಕೆ.ಹೆಚ್ ಮುನಿಯಪ್ಪ ಸ್ಪಷ್ಟನೆ ಕೊಟ್ಟಿದ್ದಾರೆ.
ಸಚಿವ ಕೆ.ಹೆಚ್ ಮುನಿಯಪ್ಪನವರಂತೂ ಅತ್ಯಂತ ಸ್ಪಷ್ಟವಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಒಂದಷ್ಟು ಪರಿಷ್ಕರಣೆ ಮಾಡ್ತೀವಿ ಅನ್ನೋ ಸುಳಿವು ಕೊಟ್ಟಿದ್ದಾರೆ.
ಪರಿಷ್ಕರಣೆ ಹೆಸರಿನಲ್ಲಿ ಗ್ಯಾರಂಟಿಗಳಿಗೆ ಬ್ರೇಕ್ ಬೀಳುತ್ತೋ? ಬರೀ ಮಾನದಂಡಗಳ ಆಧಾರದಲ್ಲಿ ಮುಂದುವರೆಯುತ್ತವೋ? ಅನ್ನೋ ಗೊಂದಲ ಕಾಡುತ್ತಿದೆ. ಯಾವಾಗ ಹೈಕಮಾಂಡ್ ಮುಂದೆಯೇ ಗ್ಯಾರಂಟಿಗಳ ಗೊಂದಲದ ಮಾತುಕತೆ ಶುರುವಾಯ್ತೋ? ಆ ಕ್ಷಣವೇ ದೆಹಲಿಯಲ್ಲಿ ಇಂಥದ್ದೊಂದು ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನವನ್ನು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಎಲ್ಲವೂ ಸುಳ್ಳು.. ನಾವು ಗ್ಯಾರಂಟಿಗಳನ್ನು ನಿಲ್ಲಿಸೋದಿಲ್ಲ.. ಆದರೇ, ದುರುಪಯೋಗ ಆಗ್ತಿರೋ ಕಡೆಗಳ ಬಗ್ಗೆ ಗಮನ ಕೊಡ್ತೀವಿ. ಪರಿಶೀಲನೆ ಮಾಡ್ತೀವಿ ಅನ್ನೋ ಮೂಲಕ ಡಿಸಿಎಂ ಡಿಕೆ ಕೂಡ ಪರಿಷ್ಕರಣೆಯ ಸುಳಿವು ನೀಡುತ್ತಿದ್ದಾರೆ. ಆದರೇ, ಪಕ್ಷದೊಳಗೇ ಒಂದಷ್ಟು ನಾಯಕರು ಚಕಾರ ಎತ್ತುತ್ತಿದ್ದಾರೆ ಅನ್ನೋ ಸಂಗತಿಯನ್ನು ಖುದ್ದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಬಿಚ್ಚಿಟ್ಟಿದ್ದಾರೆ.
ಗ್ಯಾರಂಟಿ ಯೋಜನೆಗಳು ಪರಿಷ್ಕರಣೆಗೊಳ್ಳುವುದು ಉತ್ತಮ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಹತ್ವದ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.. ಗ್ಯಾರಂಟಿಗಳನ್ನು ನಿಲ್ಲಿಸಬೇಕು ಅಂತ ನಾವು ಹೇಳುತ್ತಲೇ ಇಲ್ಲ.. ಆದರೇ, ಇಂಥಾ ಲಾಭ ಬಡವರಿಗಷ್ಟೇ ಸಿಗಬೇಕೇ ವಿನಃ. ಬಡವರ ಹೆಸರಿನಲ್ಲಿ ಶ್ರೀಮಂತರ ಕೈ ಸೇರ್ತಿರೋ ಹಣಕ್ಕೆ ಬ್ರೇಕ್ ಹಾಕೋದು ಒಳ್ಳೆಯದು.. ಇದರಿಂದಾಗಿ ಕನಿಷ್ಟ ಅಂದ್ರೂ ಹತ್ತು ಸಾವಿರ ಕೋಟಿ ಬೊಕ್ಕಸಕ್ಕೆ ಉಳಿತಾಯವಾಗಲಿದೆ ಎನ್ನುತ್ತಿದ್ದಾರೆ.
ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಿಸೋದಕ್ಕೆ ನಾವ್ಯಾರೂ ಸಲಹೆ ಕೊಟ್ಟಿಲ್ಲ. ಜನ ಸಾಮಾನ್ಯರು ಹಾಗೂ ವಿಪಕ್ಷಗಳೇ ಶ್ರೀಮಂತರಿಗೆ ಸಿಗುತ್ತಿರೋ ಗ್ಯಾರಂಟಿಗೆ ಬ್ರೇಕ್ ಹಾಕಿ ಅಂತಿದ್ದಾರೆ. ಹಾಗಾಗಿಯೇ ಪರಿಷ್ಕರಣೆಯ ಸಲಹೆ ಕೊಟ್ಟಿದ್ದೇವೆ. ಯೋಜನೆಗಳ ಪರಿಷ್ಕರಣೆಯಿಂದ ಸರ್ಕಾರದಿಂದ ಜನಪ್ರಿಯತೆ ಹೆಚ್ಚಲಿದೆ. ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಲು ಯಾರು ಹೇಳಿದ್ದು?ಅದನ್ನು ನಾವು ಸ್ಥಗಿತಗೊಳಿಸುವುದಿಲ್ಲ. ಇದರ ಬಗ್ಗೆ ಕ್ಯಾಬಿನೆಟ್ ಹಾಗೂ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ನಡೆದಿಲ್ಲ. ಇದರ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.






