ನಾಯಕತ್ವ ಬದಲಾವಣೆ; ಜ.19ಕ್ಕೆ ಡಿಕೆಶಿ, ಜ.21ಕ್ಕೆ ಸಿದ್ದರಾಮಯ್ಯ ಮತ್ತೆ ದೆಹಲಿಯಾತ್ರೆ
Views: 20
ಕನ್ನಡ ಕರಾವಳಿ ಸುದ್ದಿ: ನಾಯಕತ್ವಗೊಂದಲ, ಸಚಿವ ಸಂಪುಟ ಪುನಾರಚನೆ ನಾಯಕತ್ವ ಗೊಂದಲದ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂದಿನ ವಾರ ದೆಹಲಿಗೆ ತೆರಳುತ್ತಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರೂ ಬೇರೆ ಬೇರೆ ಕೆಲಸದ ನಿಮಿತ್ತ ದೆಹಲಿಗೆ ತೆರಳುತ್ತಿದ್ದರೂ ಇಬ್ಬರೂ ಹೈಕಮಾಂಡ್ ನಾಯಕರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಚರ್ಚಿಸುವ ಇರಾದೆಯಲ್ಲಿದ್ದಾರೆ. ಸಿದ್ದರಾಮಯ್ಯ ಅವರು ಬಜೆಟ್ ಗೂ ಮೊದಲೇ ಸಚಿವ ಸಂಪುಟವನ್ನು ಪುನಾರಚನೆ ಮಾಡಿ ಕೊಳ್ಳುವ ಲೆಕ್ಕಾಚಾರದಲ್ಲಿದ್ದರೆ, ಡಿ.ಕೆ. ಶಿವಕುಮಾರ್ ‘ಸೂತ್ರ’ವನ್ನು ಪ್ರಕಟಿಸುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಲು ತಮ್ಮ ಪ್ರಯತ್ನ ಮುಂದುವರಿಸಲು ದೆಹಲಿಗೆ ತೆರಳಲಿದ್ದಾರೆ.
ಮೂಲಗಳ ಪ್ರಕಾರ, ಅಸ್ಸಾಂ ವಿಧಾನಸಭಾ ಚುನಾವಣೆ ಸಭೆಯಲ್ಲಿ ಭಾಗವಹಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜ.19ಕ್ಕೆ ತೆರಳುತ್ತಿದ್ದಾರೆ. ಸಿದ್ದರಾಮಯ್ಯ ಅವರು 20, 21ರಂದು ನಡೆಯಲಿರುವ ನರೇಗಾ ಬಚಾವ್ ಸಭೆಯಲ್ಲಿ ಭಾಗವಹಿಸಲು ತೆರಳುತ್ತಿದ್ದಾರೆ. ಈ ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಸಹ ಭಾಗವಹಿಸಲಿದ್ದಾರೆ. ಆದ್ದರಿಂದ ಜ.20, 21ರಂದು ನರೇಗಾ ಹೋರಾಟಕ್ಕೆ ಸಂಬಂಧಿಸಿದಂತೆ ಸಭೆ ಪೂರ್ಣಗೊಂಡ ಬಳಿಕ ರಾಜ್ಯ ರಾಜಕೀಯಕ್ಕೆ ಸಂಬಂಧಿಸಿದಂತೆ ರಾಜ್ಯ ನಾಯಕರೊಂದಿಗೆ ಹೈಕಮಾಂಡ್ ಚರ್ಚೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಸಂಪುಟ ಪುನಾರಚನೆಗೆ ಬೇಡಿಕೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ದೆಹಲಿ ಪ್ರವಾಸದ ವೇಳೆ ಸಂಪುಟ ಪುನಾರಚನೆಗೆ ಸಂಬಂಧಿಸಿದಂತೆ ಚರ್ಚಿಸುವ ಸಾಧ್ಯತೆಯಿದೆ. ರಾಜ್ಯದಲ್ಲಿ ಸರಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದಿದೆ. ಸಂಪುಟ ಪುನಾರಚನೆಗೆ ಇದು ಸೂಕ್ತ ಸಮಯ. ಆದ್ದರಿಂದ ಪಕ್ಷದ ಹೈಕಮಾಂಡ್ ಈ ವಿಷಯದಲ್ಲಿ ಶೀಘ್ರ ತೀರ್ಮಾನ ಕೈಗೊಳ್ಳಬೇಕು ಎನ್ನುವ ಬೇಡಿಕೆ ಇಡುವ ಸಾಧ್ಯತೆಯಿದೆ.
ಇದರೊಂದಿಗೆ ಮಾರ್ಚ್‌ನಲ್ಲಿ ಮಂಡಿಸುವ ಬಜೆಟ್ ಗೂ ಮೊದಲೇ ಸಂಪುಟ ಪುನಾರಚನೆ ಮಾಡುವುದು ಸೂಕ್ತ ಎಂದು ಹೈಕಮಾಂಡ್‌ಗೆ ಮನವಿ ಮಾಡಲಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ ನಿಂದ ಸ್ಪಷ್ಟನೆ ಪಡೆದ ಬಳಿಕವೇ ಬಜೆಟ್ ಸಭೆಯನ್ನು ಅಧಿಕೃತವಾಗಿ ಆರಂಭಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. ಈ ಕಾರಣಕ್ಕಾಗಿಯೇ ಗಣರಾಜ್ಯೋತ್ಸವದ ಬಳಿಕ ಅಧಿಕೃತವಾಗಿ ಬಜೆಟ್ ಸಭೆ ನಡೆಸಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.






