ಶೀಘ್ರವೇ ರಾಜ್ಯ ನಾಯಕತ್ವ ಗೊಂದಲಕ್ಕೆ ತೆರೆ?
Views: 12
ಕನ್ನಡ ಕರಾವಳಿ ಸುದ್ದಿ: ಕರ್ನಾಟಕ ಸರಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿದಂತೆ ಕಳೆದ ನಾಲ್ಕು ತಿಂಗಳಿನಿಂದ ನಡೆಯುತ್ತಿರುವ ಹಗ್ಗಜಗ್ಗಾಟಕ್ಕೆ ‘ಕೊನೆ’ ಬಂದಿದೆಯೇ ಎನ್ನುವ ಕುತೂಹಲ ಕಾಂಗ್ರೆಸ್ ವಲಯದಲ್ಲಿ ಶುರುವಾಗಿದೆ. ಮುಖ್ಯಮಂತ್ರಿ ಬದಲಾವಣೆ ವಿಷಯಕ್ಕೆ ಸಂಬಂಧಿಸಿದಂತಿರುವ ಗೊಂದಲಕ್ಕೆ ಪಕ್ಷದ ಹೈಕಮಾಂಡ್ ಸ್ಪಷ್ಟನೆ ನೀಡಬೇಕೆನ್ನುವ ಮನವಿಯೊಂದಿಗೆ ಸಚಿವ ಸತೀಶ್ ಜಾರಕಿಹೊಳಿ, ಶನಿವಾರದಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದಾರೆ.
ಸುದೀರ್ಘ ಸಭೆಯ ಬಳಿಕ ‘ಶೀಘ್ರದಲ್ಲಿಯೇ ತಾರ್ತಿಕ ನಿರ್ಧಾರವನ್ನು ಹೈಕಮಾಂಡ್ ತಿಳಿಸಲಿದೆ’ ಎನ್ನುವ ಸತೀಶ್ ಹೇಳಿಕೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಸದ್ಯ ಸಿದ್ದರಾಮಯ್ಯ, ಬಣದ ಶಾಸಕರು ಮುಖ್ಯಮಂತ್ರಿ ಯಾಗಿ ಸಿದ್ದರಾಮಯ್ಯರನ್ನೇ ಮುಂದುವರಿಸಬೇಕು ಎಂಬ ಆಗ್ರಹ ಮುಂದುವರಿಸಿದ್ದಾರೆ. ಮತ್ತೊಂದು ಕಡೆ ಶಿವಕುಮಾರ್ ಬಣದ ನಾಯಕರು ತಮ್ಮ ನಾಯಕನಿಗೆ ಅವಕಾಶ ನೀಡಬೇಕು ಎಂಬ ಒತ್ತಾಯವನ್ನು ಮುಂದುವರಿಸಿದ್ದಾರೆ. ಈ ಕುರಿತಂತೆ ಎರಡೂ ಬಣಗಳು ಬಹಿರಂಗ ಹೇಳಿಕೆಯನ್ನೇ ನೀಡುತ್ತಿವೆ.
ಇದರೊಂದಿಗೆ, ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡಬಾರದು. ಒಂದು ವೇಳೆ ಬದಲಾವಣೆ ಮಾಡಿದರೆ ಮುಂದಿನ ದಿನದಲ್ಲಿ ರಾಜಕೀಯವಾಗಿ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆಯೂ ಚರ್ಚೆ?: ಸದ್ಯ ಮುಖ್ಯಮಂತ್ರಿ ಬದಲಾವಣೆ ಬೇಡ ಎನ್ನುವ ಜತೆಜತೆ ಸಚಿವ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಪಕ್ಷ ಸಂಘಟನೆಗೆ ಒತ್ತು ನೀಡುವ ಉದ್ದೇಶದಿಂದ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಚರ್ಚಿಸಿದ್ದಾರೆ ಎನ್ನಲಾಗಿದೆ. ಒಂದೆಡೆ ಶಾಸಕರು ವಿದೇಶಕ್ಕೆ ತೆರಳಿರುವಾಗ, ಸತೀಶ್ ನೇತೃತ್ವದ ಕೆಲ ಶಾಸಕರು ಖರ್ಗೆ ಅವರನ್ನು ಭೇಟಿಯಾಗಿ, ಈ ರೀತಿಯ ಬೇಡಿಕೆ ಇಟ್ಟಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ.






