ರಾಜಕೀಯ

ಒಂದೇ ಬಾರಿಗೆ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಚಿಂತನೆ: ಡಿಸಿಎಂ ಡಿ.ಕೆ.ಶಿವಕುಮಾರ್

Views: 57

ಕನ್ನಡ ಕರಾವಳಿ ಸುದ್ದಿ: ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ ನಡೆಸಲು ನಮ್ಮ ಸರ್ಕಾರ ತೀರ್ಮಾನಿಸಿದೆ. ಇವುಗಳಿಗೆ ಇದ್ದ ಮೀಸಲಾತಿ ಸಮಸ್ಯೆ ಬಗೆಹರಿಸಲು ಸಿಎಂ ಹಾಗೂ ಸಚಿವರು ತಿಳಿಸಿದ್ದಾರೆ. ಗ್ರಾಮ ಪಂಚಾಯತ್ ಚುನಾವಣೆಗಳನ್ನೂ ಪಕ್ಷದ ಚಿಹ್ನೆ ಮೇಲೆ ನಡೆಸಬೇಕು ಎಂದು ಅನೇಕರು ಸಲಹೆ ನೀಡಿದ್ದು, ನಾವಿನ್ನೂ ಆ ಬಗ್ಗೆ ತೀರ್ಮಾನ ಮಾಡಿಲ್ಲ. ಒಂದೇ ಬಾರಿಗೆ ಎಲ್ಲವನ್ನು ನಡೆಸಲು ಚಿಂತನೆ ನಡೆಯುತ್ತಿದೆ” ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.

”ನ್ಯಾಯಾಲಯ ಆದೇಶ ನೀಡಿದೆ. ನಮ್ಮ ಸರ್ಕಾರ ಸಂವಿಧಾನದ 73, 74ನೇ ತಿದ್ದುಪಡಿಗೆ ಬದ್ಧವಾಗಿದೆ. ಯುವಕರಿಗೆ ಅಧಿಕಾರ ನೀಡಬೇಕು, ಹೊಸ ಪೀಳಿಗೆ ಅಧಿಕಾರಕ್ಕೆ ಬರಬೇಕು. ಈಗ ಐದು ಪಾಲಿಕೆಗಳಿಂದ 369 ವಾರ್ಡ್ಗಳನ್ನು ರಚಿಸಲಾಗಿದೆ. ಇನ್ನು ಬೆಂಗಳೂರಿನ ಹೊರವಲಯವನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿದೆ” ಎಂದರು.

ಈ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮತಯಂತ್ರದ ಹೊರತಾಗಿ ಮತಪತ್ರ ಬಳಸುವ ಬಗ್ಗೆ ಪ್ರತಿಕ್ರಿಯಿಸುತ್ತಾ, ”ನನಗೂ ಈ ಬಗ್ಗೆ ಮಾಹಿತಿ ಬಂದಿದೆ. ಇದು ರಾಜ್ಯ ಚುನಾವಣಾ ಆಯೋಗಕ್ಕೆ ಬಿಟ್ಟ ವಿಚಾರ. ಮತಪತ್ರ ಬಳಸುವುದರಲ್ಲಿ ತಪ್ಪೇನು ಇಲ್ಲ. ಯಾವ ರೂಪದಲ್ಲಿ ಚುನಾವಣೆ ನಡೆಸಲಾಗುವುದು ಎನ್ನುವುದಕ್ಕಿಂತ ಮತದಾನ ನಡೆಯುವುದು ಬಹಳ ಮುಖ್ಯ. ಈಗ ಕರಡು ಮತದಾರರ ಪಟ್ಟಿ ಬಿಡುಗಡೆಯಾಗಿದ್ದು, ನಾವು ಈಗಾಗಲೇ ಬಿಎಲ್ಎಗಳ ಸಿದ್ಧತೆ ಮಾಡಿಕೊಂಡಿದ್ದೇವೆ. ಯಾವುದೇ ಮತದಾರರ ಹೆಸರು ಪಟ್ಟಿಯಲ್ಲಿ ಬಿಟ್ಟುಹೋಗಿದ್ದರೆ ಅವರಿಗೆ ಮತ್ತೆ ಅವಕಾಶ ಕಲ್ಪಿಸಬೇಕು ಹಾಗೂ ಅವರ ಹಕ್ಕನ್ನು ಅವರಿಗೆ ನೀಡಬೇಕು. ಅಧಿಕಾರಿಗಳ ಕಾರ್ಯದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಅದಕ್ಕಾಗಿಯೇ ಇರುವ ಕಾನೂನು ಚೌಕಟ್ಟಿನಲ್ಲಿ ಚುನಾವಣಾ ಆಯೋಗ ಕೆಲಸ ಮಾಡಲಿದೆ” ಎಂದು ಪ್ರತಿಕ್ರಿಯಿಸಿದರು.

ಕೇಂದ್ರ ಚುನಾವಣಾ ಆಯೋಗದ ಮೇಲೆ ಅನುಮಾನದಿಂದ ಮತಪತ್ರ ಬಳಸಲಾಗುವುದೇ ಎಂದು ಕೇಳಿದಾಗ, ”ಚುನಾವಣೆ ಮಾಡಲು ನಾವ್ಯಾರು? ಚುನಾವಣೆ ನಡೆಸುತ್ತಿರುವುದು ಚುನಾವಣಾ ಆಯೋಗ. ರಾಜ್ಯ ಚುನಾವಣಾ ಆಯೋಗ ನಮ್ಮ ಸರ್ಕಾರದ ನಿಯಂತ್ರಣಕ್ಕೆ ಬರುವುದಿಲ್ಲ. ಅವರೇ ಏನು ಮಾಡಬೇಕು ಎಂದು ತೀರ್ಮಾನ ಮಾಡುತ್ತಾರೆ ಎಂದರು.

Related Articles

Back to top button
error: Content is protected !!