ಹೊಸ ವರ್ಷದಲ್ಲಿ ಗ್ರಾಪಂ, ತಾಪಂ, ಜಿಪಂ, ಪೌರಾಡಳಿತ, ವಿಧಾನಸಭೆ, ವಿಧಾನಪರಿಷತ್, ರಾಜ್ಯಸಭೆ… ಸಾಲು ಸಾಲು ಚುನಾವಣೆಗಳು!
Views: 50
ಕನ್ನಡ ಕರಾವಳಿ ಸುದ್ದಿ ಹೊಸ ವರ್ಷವನ್ನು ಹೊಸ ಹುರುಪಿನಲ್ಲಿ ಸ್ವಾಗತಿಸಿರುವ ರಾಜ್ಯ ನಾಯಕರಿಗೆ, 2026ರಲ್ಲಿ ಎದುರಾಗಲಿರುವ ಸರಣಿ ಚುನಾವಣೆಗಳು ಸವಾಲು ಒಡ್ಡುವ ಸಾಧ್ಯತೆಯಿದೆ.
ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್. ಈ ಮೂರು ಪಕ್ಷಗಳಲ್ಲಿ ತಮ್ಮದೆಯಾದ ಸಮಸ್ಯೆಯಿರುವುದರಿಂದ, ಈ ಸಮಸ್ಯೆಗಳ ಹೊರತಾಗಿಯೂ ಚುನಾವಣೆಯಲ್ಲಿ ಚಮತ್ಕಾರ ಮಾಡಬೇಕಾದ ಒತ್ತಡ ನಾಯಕರಲ್ಲಿದೆ. ಅದರಲ್ಲಿಯೂ ಈ ವರ್ಷ ಮಾರ್ಚ್ ಬಳಿಕ ಸರಣಿ ಚುನಾವಣೆಗಳಿರುವುದರಿಂದ ಇಡೀ ವರ್ಷ ಚುನಾವಣಾ ಜಪದಲ್ಲಿ ಹೋಗುವ ಸಾಧ್ಯತೆ ದಟ್ಟವಾಗಿದೆ.
ಬರಲಿರುವ ಚುನಾವಣೆಗಳು ಯಾವುದು?
ರಾಜ್ಯ ಸಭಾ ಚುನಾವಣೆ
ವಿಧಾನಸಭೆ ಉಪಚುನಾವಣೆ
ವಿಧಾನಪರಿಷತ್ ಚುನಾವಣೆ
ಪೌರಾಡಳಿತ ಸಂಸ್ಥೆಗಳ ಚುನಾವಣೆ
ಗ್ರಾಪಂ, ತಾಪಂ, ಜಿಪಂ ಚುನಾವಣೆ
ಜಿಬಿಎ ವ್ಯಾಪ್ತಿಯ ಚುನಾವಣೆ
ಮೇನಲ್ಲಿ ಕರ್ನಾಟಕದಲ್ಲಿ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಈ ಸಮಯದಲ್ಲಿಯೇ ಹಾಲಿ ಶಾಸಕರಾದ ಶಾಮನೂರು ಶಿವಶಂಕರಪ್ಪ ಹಾಗೂ ಎಚ್.ವೈ.ಮೇಟಿ ಅವರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಈ ಎರಡೂ ಕ್ಷೇತ್ರಗಳಲ್ಲಿ ಅನುಕಂಪದ ಅಲೆಯಿದ್ದರೂ, ಬಿಜೆಪಿಗರು ಎರಡರಲ್ಲಿ ಒಂದನ್ನಾದರೂ ಗೆಲ್ಲಬೇಕು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ.
ಇನ್ನು ಈಗಾಗಲೇ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಜ್ಜಾಗುವಂತೆ ನಾಯಕರು ಪದೇಪದೆ ಸೂಚನೆ ನೀಡುತ್ತಿರುವುದರಿಂದ ಉಪ ಚುನಾವಣೆಯ ಆಸುಪಾಸಿನಲ್ಲಿಯೇ ರಾಜ್ಯಾದ್ಯಂತ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುವ ಸಾಧ್ಯತೆಯಿದೆ. ಈ ಚುನಾವಣೆಗಳ ಮೇಲೆ ಸರಕಾರ ನೇರವಾಗಿ ಪರಿಣಾಮ ಬೀರದಿದ್ದರೂ, ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ ಜನ ಎಷ್ಟು ‘ಅಂಕ’ ನೀಡಬಹುದು ಎನ್ನುವ ಮಧ್ಯಂತರ ವರದಿಯನ್ನು ನೀಡುವುದು ಖಚಿತ. ಆದ್ದರಿಂದ ಈ ಸ್ಥಳೀಯ ಸಂಸ್ಥೆ ಚುನಾವಣೆಗಳು ಪ್ರಮುಖ ಪಾತ್ರವಹಿಸಲಿದೆ.
ಈಗಾಗಲೇ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮೈತ್ರಿಯಿಲ್ಲ ಎಂದ ಜೆಡಿಎಸ್ ವರಿಷ್ಠ ದೇವೇಗೌಡರು ಹೇಳಿರುವುದರಿಂದ, ಬಿಜೆಪಿ ವರಿಷ್ಠರು ಜೆಡಿಎಸ್ ನಾಯಕರೊಂದಿಗೆ ಚರ್ಚಿಸಿ ಜಂಟಿ ಸಮರಾಭ್ಯಾಸಕ್ಕೆ ಮುಂದಾಗುವರೋ ಅಥವಾ ಏಕಾಂಗಿಯಾಗಿ ಹೋರಾಡುವರೋ ಎನ್ನುವ ಗೊಂದಲ ಹಲವರಲ್ಲಿದೆ.
ನವೆಂಬರ್‌ಗೆ ಪರಿಷತ್ ಚುನಾವಣೆ: ಈ ಎರಡು ಚುನಾವಣೆ ಮುಗಿಯುವ ಹೊತ್ತಿಗೆ ನವೆಂಬರ್‌ನಲ್ಲಿ ವಿಧಾನಪರಿಷತ್‌ನ ಎರಡು ಶಿಕ್ಷಕರ ಹಾಗೂ ಎರಡು ಪದವೀಧರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈಗಾಗಲೇ ಕಾಂಗ್ರೆಸ್ ಹೈಕಮಾಂಡ್, ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಪುಟ್ಟಣ್ಣ, ಪಶ್ಚಿಮ ಪದವೀಧರ ಕೇತ್ರಕ್ಕೆ ಮೋಹನ್ ಲಿಂಬಿಕಾಯಿ, ಆಗ್ನೇಯ ಪದವೀಧರ ಕೇತ್ರಕ್ಕೆ ಶಶಿ ಹುಲಿಕುಂಟೆಮಠ, ಈಶಾನ್ಯ ಶಿಕ್ಷಕರ ಕೇತ್ರಕ್ಕೆ ಶರಣಪ್ಪ ಮಟ್ಟೂರ್ ಅವರನ್ನು ಅಂತಿಮಗೊಳಿಸಲಾಗಿದೆ. ಬಿಜೆಪಿ ಅಭ್ಯರ್ಥಿ ಘೋಷಣೆ ಬಾಕಿಯಿದೆ. ಈ ಚುನಾವಣೆಯ ಮೇಲೆ ವಿಧಾನಪರಿಷತ್ ಸಂಖ್ಯಾಬಲವೂ ಆಚೀಚೆಯಾಗುವ ಸಾಧ್ಯತೆಯಿರುವುದರಿಂದ ಈ ಚುನಾವಣೆಯೂ ಮಹತ್ವ ಪಡೆದುಕೊಳ್ಳುವುದು ನಿಶ್ಚಿತ.






