ಉಡುಪಿ: ಕೋಡಿಬೆಂಗ್ರೆ ದೋಣಿ ಪಲ್ಟಿಯಾಗಿ ಇಬ್ಬರು ಸಾವು, ಇಬ್ಬರು ಗಂಭೀರ
Views: 20
ಕನ್ನಡ ಕರಾವಳಿ ಸುದ್ದಿ: ಮಲ್ಪೆಯ ಕೂಡಿ ಬೆಂಗ್ರೆ ಡೆಲ್ಟಾ ಬೀಚ್ ನಿಂದ ಸಮುದ್ರ ವಿಹಾರಕ್ಕೆ ಹೊರಟಿದ್ದ ದೋಣಿ ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಮಗುಚಿತ ಪರಿಣಾಮ ಇಬ್ಬರು ಮತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ಕೋಡಿ ಕನ್ಯಾನ ಅಳಿವೆ ಬಾಗಿಲಿನ ಬಳಿ ಸಂಭವಿಸಿದೆ
ಮೃತರನ್ನು ಶಂಕರಪ್ಪ (22), ಸಿಂಧು (23) ಎಂದು ಗುರುತಿಸಲಾಗಿದೆ. ದಿಶಾ (26) ಅವರು ಗಂಭೀರ ಸ್ಥಿತಿಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಧರ್ಮರಾಜ (26) ಎಂಬುವವರ ಸ್ಥಿತಿ ಸ್ಥಿರವಾಗಿದೆ.
ಸರಣಿ ರಜೆ ನಿಮಿತ್ತ ಮೈಸೂರಿನ ಸರಸ್ವತಿಪುರಂನಲ್ಲಿರುವ ಕಾಲ್ ಸೆಂಟರ್ ನ 28 ಮಂದಿ ಉದ್ಯೋಗಿಗಳು ಜ.25ರಂದು ಮಲ್ಪೆಗೆ ಆಗಮಿಸಿ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದರು. ಸೋಮವಾರ ಬೆಳಿಗ್ಗೆ ಪ್ರವಾಸಿಗರನ್ನು ವಿಹಾರಕ್ಕೆ ಕರೆದೊಯ್ಯುವ ಎರಡು ದೋಣಿಗಳಲ್ಲಿ ತಲಾ 14 ಮಂದಿ ಪ್ರಯಾಣಿಸುತ್ತಿದ್ದರು. ಮಧ್ಯಾಹ್ನ 12 ಗಂಟೆಗೆ ನದಿ ಮತ್ತು ಸಮುದ್ರ ಸಂಧಿಸುವ ಹಂಗಾರಕಟ್ಟೆ ಹಡಗು ನಿರ್ಮಾಣ ಪ್ರದೇಶದ ಬಳಿ ದೋಣಿ ಮಗುಚಿಬಿದ್ದಿದೆ. ದೋಣಿ ವೇವರ್‌ರೈಡರ್ಸ್ ಕಂಪನಿಗೆ ಸೇರಿದ್ದು ಎನ್ನಲಾಗಿದೆ.
ಕೋಡಿಬೆಂಗ್ರೆಯ ಅಳಿವೆ ಪ್ರದೇಶದಲ್ಲಿ ತೀವ್ರವಾದ ಒಳ ಸುಳಿ ಇದ್ದು ಸಣ್ಣ ನಿರ್ಲಕ್ಷ್ಯವು ಪ್ರಾಣಕ್ಕೆ ಕುತ್ತಾಗಲಿದೆ. ಇದೀಗ ದೋಣಿ ಪಲ್ಟಿಯಾಗಿ ಇಬ್ಬರು ಪ್ರವಾಸಿಗರು ಜೀವ ತೆತ್ತಿದ್ದಾರೆ. ಇದೀಗ ತನಿಖೆ ನಡೆಯುತ್ತಿದ್ದು, ಈ ಘಟನೆಯ ಸತ್ಯಾಂಶ ಹೊರ ಬರಲಿದೆ. ಲೈಫ್ ಜಾಕೆಟ್ ಹಾಕದೆ ಪ್ರವಾಸಿಗರು ಹೇಗೆ ದೋಣಿಯಲ್ಲಿ ಪ್ರಯಾಣಿಸಿದರು ಎಂಬ ಕುರಿತು ತನಿಖೆ ನಡೆಯಬೇಕಾಗಿದೆ.






