ಕುಂದಾಪುರ: ಓವರ್ ಸ್ಪೀಡ್ ವಾಹನಗಳನ್ನು ರಾಡರ್ ಗನ್ ಮೂಲಕ ಪತ್ತೆ ಹಚ್ಚಿ ದಂಡ, ಕಾನೂನು ಅರಿವು ಮೂಡಿಸಿದ ಪೊಲೀಸರು
Views: 68
ಕನ್ನಡ ಕರಾವಳಿ ಸುದ್ದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಗದಿಪಡಿಸಿದ ವೇಗಕ್ಕಿಂತ ಜಾಸ್ತಿಯಾದಾಗ ವೇಗದಲ್ಲಿ ಸಂಚರಿಸುತ್ತಿದ್ದ ಹಲವು ವಾಹನಗಳಿಗೆ ಕುಂದಾಪುರ ಸಂಚಾರ ಠಾಣೆ ಪೊಲೀಸರು ಶನಿವಾರ ಸಂಜೆ ಮೋಟಾರು ನಿಯಮ ಕಾಯ್ದೆಯಡಿ ದಂಡ ವಿಧಿಸಿ, ಕಾನೂನು ಪಾಲನೆ ಅರಿವು ಮೂಡಿಸಿದರು.
ಕುಂದಾಪುರ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಜೆ ಕಾರ್ಯಾಚರಣೆಗಿಳಿದ ಪೊಲೀಸರು ಈ ಪ್ರದೇಶದಲ್ಲಿ ನಿಗದಿಪಡಿಸಿದ (80ಕಿ.ಮೀ.) ವೇಗಕ್ಕಿಂತ ಹೆಚ್ಚು ವೇಗದಲ್ಲಿ ಸಂಚರಿಸಿದ ವಾಹನಗಳನ್ನು ಸ್ಪೀಡ್ ರಾಡರ್ ಗನ್ (ವೇಗ ಪರಿಶೀಲನೆ ಯಂತ್ರ) ಮೂಲಕ ಪತ್ತೆ ಮಾಡಿ ವಾಹನ ತಡೆದು ಸಂಬಂಧ ಪಟ್ಟವರಿಗೆ ವೇಗ ಮಿತಿಯ ಬಗ್ಗೆ ಮಾಹಿತಿ ನೀಡಿದರು ಹಾಗೂ ಅತೀ ವೇಗದಲ್ಲಿ ಸಂಚರಿಸಿದ ಒಂದಷ್ಟು ಮಂದಿಗೆ ದಂಡ ವಿಧಿಸಿದರು.
ಹೆಚ್ಚುತ್ತಿರುವ ರಸ್ತೆ ಅಪಘಾತಕ್ಕೆ ವಾಹನಗಳ ಅತಿಯಾದ ವೇಗವೂ ಒಂದು ಕಾರಣವಾಗಿದ್ದು ಇಲಾಖಾ ಮೇಲಾಧಿ ಕಾರಿಗಳ ಮಾರ್ಗದರ್ಶನದಲ್ಲಿ ಈಗಾಗಲೇ ಮೂರ್ನಾಲ್ಕು ಬಾರಿ ಅತೀ ವೇಗ ಪರಿಶೀಲನೆ ಕಾರ್ಯಾಚರಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾಡಲಾಗಿದೆ. ವರದಿಯಾಗುತ್ತಿರುವ ಅಪಘಾತ ಪ್ರಕರಣಗಳಲ್ಲಿ ಸಾವಿನ ಸಂಖ್ಯೆಯೂ ಹೆಚ್ಚಿದ್ದು ಈ ಬಗ್ಗೆ ಇಲಾಖೆ ಗಂಭೀರವಾಗಿ ಪರಿಗಣಿಸುತ್ತದೆ. ಮುಂಬರುವ ದಿನದಲ್ಲಿ ರಾಜ್ಯ ಹೆದ್ದಾರಿ ಸಹಿತ ಅಗತ್ಯ ಕಡೆಗಳಲ್ಲಿ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಕುಂದಾಪುರ ಸಂಚಾರ ಠಾಣೆ ಎಸ್‌ಐ ಅನೂಪ್ ನಾಯಕ್ ಮಾಹಿತಿ ನೀಡಿದರು.
ಈ ವೇಳೆ ಟ್ರಾಫಿಕ್ ಠಾಣೆ ಪಿಎಸ್‌ಐ ಸುಧಾ ಪ್ರಭು, ಎಎಸ್‌ಐಗಳಾದ ಸುರೇಶ್, ನಾಗರಾಜ್ ಕುಲಾಲ್, ನಾಗಪ್ಪ, ಹೆಡ್ ಕಾನ್‌ಸ್ಟೇಬಲ್ ಕೇಶವ, ವೀರಪ್ಪ ಶ್ರೀನಿವಾಸ, ಕಾನ್‌ಸ್ಟೇಬಲ್ ಪ್ರಸಾದ್, ವೆಂಕಟೇಶ್ ಕಾರ್ಯಾಚರಣೆಯಲ್ಲಿದ್ದರು.






