ಮದುವೆ ಎನ್ನುವುದು ಒಂದೆರಡು ದಿನದ ಮಕ್ಕಳಾಟಿಕೆ ಅಲ್ಲ!.. ಯಾಕೆ ಗೊತ್ತೆ?
Views: 21
ಕನ್ನಡ ಕರಾವಳಿ ಸುದ್ದಿ: ಮದುವೆ ಎನ್ನುವುದು ಮಕ್ಕಳಾಟಿಕೆ ಅಲ್ಲ! ಈ ಮಾತನ್ನು ಹೆಚ್ಚಿನವರ ಬಾಯಲ್ಲಿ ನೀವು ಕೇಳಿರಬಹುದು. ಹೌದು ಮದುವೆ ಎನ್ನುವುದು ಜೀವನದ ಅತೀ ಮಹತ್ವದ ಘಟ್ಟ! ಇಲ್ಲಿ ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ.
ಅದಕ್ಕೇ ಹಿರಿಯರು ಹೇಳಿರುವುದು, ಮದುವೆ ಅನ್ನುವುದು ಒಂದೆರಡು ದಿನದ ಆಟವಲ್ಲ, ಇದು ಜೀವನ ಪೂರ್ತಿಯಾಗಿ ಸಂಗಾತಿ ಜತೆಗೆ ಬಾಳುತ್ತೇವೆ ಎನ್ನುವುದನ್ನು ಅಧಿಕೃತವಾಗಿ ಘೋಷಿಸುವಂತಹ ಸುಸಂದರ್ಭ
ಅಷ್ಟಕ್ಕೂ ‘ನನ್ನ ಬಳಿ ಹಣವಿದೆ, ಉದ್ಯೋಗವಿದೆ. ನಾನು ಏನು ಬೇಕಾದರೂ ಮಾಡುತ್ತೇನೆ?! ‘ ಎನ್ನುವವರಿಗೆ ಜೀವನದ ವ್ಯಾಪ್ತಿ ಅರ್ಥವಾಗಿಲ್ಲ. ಸಿಕ್ಕಿದ್ದನ್ನು ಭೋಗಿಸಿದ ಮಾತ್ರಕ್ಕೇ ನೆಮ್ಮದಿ ಮತ್ತು ತೃಪ್ತಿಗಳಂತೂ ಸಿಗಲಾರವು. ಅವು ಸಿಗುವುದು ಪ್ರೀತಿಪಾತ್ರರ ಸಹವಾಸದಲ್ಲಿ ನೋವು ನಲಿವುಗಳನ್ನು ಹಂಚಿಕೊಂಡಾಗ, ಕರ್ತವ್ಯಗಳನ್ನು ಸಲ್ಲಿಸಿದಾಗ, ಕಲಿತಾಗ, ಕಳಿತಾಗ, ತನ್ಮೂಲಕ ತಾಳ್ಮೆ, ಕ್ಷಮೆ, ವಿರಕ್ತಿಗಳನ್ನೂ ಕಲಿತು ಪಕ್ವರಾದಾಗ.
ದೊಡ್ಡವರಿಗಂತೂ ತಮ್ಮ ಮಕ್ಕಳಿಗೆ ಮದುವೆ ಮಾಡುವ ತವಕ. ಆದರೆ ಮಕ್ಕಳಿಗೆ ಇನ್ನೂ ಸ್ವಲ್ಪ ದಿನಗಳ ಕಾಲ ಆರಾಮವಾಗಿ ಇದ್ದು ಜೀವನವನ್ನು ಎಂಜಾಯ್ ಮಾಡಬೇಕು ಎನ್ನುವ ಬಯಕೆ. ಆದರೆ ಬಲಾಢ್ಯರೇ ಬಲಿಷ್ಠ ಎನ್ನುವಂತೆ ಇಲ್ಲಿ ಗೆಲ್ಲುವುದು ಪೋಷಕರು ಮಾತ್ರ. ಹಾಗೋ ಹೀಗೋ ಮಾಡಿ ತಮ್ಮ ಮಕ್ಕಳನ್ನು ಒಪ್ಪಿಸಿ ಮದುವೆ ಮಾಡಿ ತಮ್ಮ ಜವಾಬ್ದಾರಿ ಕಳೆದುಕೊಂಡು ಬಿಡುತ್ತಾರೆ.
ಆದರೆ ನಂತರ ತಮ್ಮ ಪಾಲಿಗೆ ಬಂದ ಜೀವನವನ್ನು ಮಕ್ಕಳಾದವರು ಹೇಗೆ ನಿರ್ವಹಿಸುತ್ತಾರೆ ಎಂಬುದೇ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿ ಪೋಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಕೆಲವರು ತುಂಬಾ ಬುದ್ಧಿವಂತಿಕೆ ಯಿಂದ ಅಚ್ಚುಕಟ್ಟಾಗಿ ಜೀವನ ಸಾಗಿಸಿದರೆ ಇನ್ನು ಕೆಲವರು ಮದುವೆಯಾದ ಒಂದು ವಾರದಲ್ಲಿ ಡೈವೋರ್ಸ್ ಗಾಗಿ ಕೋರ್ಟ್ ಮೆಟ್ಟಿಲು ಹತ್ತಿರುತ್ತಾರೆ. ಈಗಂತೂ ಕೆಲವು ಯುವಕ / ಯುವತಿಯರು ಇಂತಹ ಅದೆಷ್ಟೋ ಉದಾಹರಣೆಗಳನ್ನು ನೋಡಿ ಮದುವೆಯಿಂದ ಸಾಧ್ಯವಾದಷ್ಟು ದೂರ ಉಳಿಯಲು ಬಯಸುತ್ತಾರೆ.
ಮದುವೆಯ ಬಳಿಕ ಎಲ್ಲವೂ ನೀವು ಅಂದುಕೊಂಡಂತೆ ನಡೆಯುತ್ತದೆ ಎಂಬುದು ಶುದ್ಧ ಸುಳ್ಳು. ನಿಮ್ಮ ಊಹೆಗೂ ಮೀರಿ ಎದುರಾಗುವ ಕೆಲವು ಸಂದರ್ಭಗಳು ನಿಮ್ಮನ್ನು ಕಷ್ಟದ ಕಡೆಗೆ ಬರ ಸೆಳೆಯುತ್ತವೆ.
ಮದುವೆಗೆ ಮುಂಚೆ ಗಂಡಾಗಲೀ ಅಥವಾ ಹೆಣ್ಣಾಗಲೀ ಇಬ್ಬರಿಗೂ ಸಾಕಷ್ಟು ಕನಸುಗಳಿರುತ್ತವೆ. ನಮ್ಮ ಜೀವನ ಮದುವೆ ಆದ ಮೇಲೆ ಇದೇ ರೀತಿ ಇರುತ್ತದೆ ಎಂದು ಮನಸ್ಸಿನಲ್ಲೇ ಲೆಕ್ಕಾಚಾರ ಹಾಕಿಕೊಂಡಿರುತ್ತಾರೆ. ಆದರೆ ಮದುವೆಯಾದ ಬಳಿಕ ಸಾಸಿವೆಯಷ್ಟು ಸುಖ ಮಾತ್ರ ಸಿಗುತ್ತದೆ ಎಂದು ಯಾರೋ ಒಬ್ಬ ತತ್ವಜ್ಞಾನಿಯ ಮಾತು ನಿಜ ಇರಬಹುದು ಎನಿಸಲು ಪ್ರಾರಂಭ ಆಗುತ್ತದೆ.
ಗಂಡು ಮತ್ತು ಹೆಣ್ಣು ಇಬ್ಬರೂ ಒಬ್ಬರಿಗೊಬ್ಬರು ಕೊಂಡಿಯಾಗಿ ಪ್ರಾರಂಭ ಮಾಡಿದ ದಿನಗಳು ತುಂಬಾ ರೋಚಕ. ಒಂದೇ ಮಾತಿನಲ್ಲಿ ಹೇಳುವುದಾದರೆ ಇಬ್ಬರನ್ನೂ ಈ ಸಮಯದಲ್ಲಿ ಹಿಡಿಯುವುದಕ್ಕೆ ಸಾಧ್ಯವಿರುವುದಿಲ್ಲ.
ಮದುವೆಗೆ ಮೊದಲು ದೈಹಿಕ ಅನ್ಯೋನ್ಯತೆಯು ಹೆಚ್ಚು ಆಕರ್ಷಣೀಯವಾಗಿತ್ತು. ಆದರೆ ಮದುವೆ ಬಳಿಕ ಭಾವನಾತ್ಮಕ ಅನ್ಯೋನ್ಯತೆಯು ಪ್ರಮುಖ ಪಾತ್ರ ವಹಿಸುವುದು.
ಮದುವೆಯಾದ ಬಳಿಕ ತಕ್ಷಣದಲ್ಲೇ ಒಬ್ಬರನ್ನೊಬ್ಬರು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಒಂದಾಗಲು ಇಬ್ಬರೂ ಏಕಾಂತವಾಗಿ ಹನಿಮೂನ್ ಪ್ರಯಾಣ ಕೈಗೊಳ್ಳುತ್ತಾರೆ. ಈ ಸಂದರ್ಭ ನಿಜಕ್ಕೂ ಇಬ್ಬರಿಗೂ ಸ್ವರ್ಗವೇ ಸರಿ. ತಮ್ಮಿಷ್ಟದ ಹಾಗೆ ತಮಗೆ ಬೇಕಾದ ಕಡೆಗಳಲ್ಲಿ ಸುತ್ತಾಡಿ ಮನೆಗೆ ವಾಪಸಾಗುತ್ತಾರೆ. ಇದರ ನಂತರವೇ ಶುರುವಾಗುವುದು ನಿಜವಾದ ಜೀವನದ ಪ್ರಯಾಣ.






