ಸೀತಾವಲ್ಲಭ, ಗಾಂಧಾರಿ, ರಾಧಾರಮಣ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ ಕಾವ್ಯ ಗೌಡ ದಂಪತಿ ಮೇಲೆ ಹಲ್ಲೆ!
Views: 68
ಕನ್ನಡ ಕರಾವಳಿ ಸುದ್ದಿ: ಸೀತಾವಲ್ಲಭ, ಗಾಂಧಾರಿ, ರಾಧಾರಮಣ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಕನ್ನಡಿಗರಿಗೆ ಪರಿಚಿತರಾಗಿರುವ ಕಾವ್ಯ ಗೌಡ ಹಾಗೂ ಅವರ ಪತಿ ಸೋಮಶೇಖರ್ ಅವರ ಮೇಲೆ ಭೀಕರ ಹಲ್ಲೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಯಾಂಡಲ್‌ವುಡ್ ವಲಯದಲ್ಲಿ ಈ ಘಟನೆ ಸಂಚಲನ ಮೂಡಿಸಿದೆ.

ನಟಿ ಕಾವ್ಯ ಗೌಡ ಅವರ ಪತಿ ಸೋಮಶೇಖರ್ ಅವರ ಅತ್ತಿಗೆಯ ತಂದೆ ರವಿಕುಮಾರ್ ಹಾಗೂ ಇತರರಿಂದ ಈ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ. ನಟಿಯ ಜನಪ್ರಿಯತೆಯನ್ನು ಸಹಿಸಲಾಗದೆ, ಉದ್ದೇಶಪೂರ್ವಕವಾಗಿ ಅವರ ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಅಷ್ಟೇ ಅಲ್ಲದೆ, ನಟಿಗೆ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿ, ಅವರ ಪತಿಗೆ ಚಾಕುವಿನಿಂದ ಇರಿದು ಗಾಯಗೊಳಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ಘಟನೆಯಿಂದ ನಟಿ ಕಾವ್ಯ ಗೌಡ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ. ಪ್ರಸ್ತುತ ಗಾಯಗೊಂಡಿರುವ ದಂಪತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾವ್ಯ ಗೌಡ ಅವರ ಸಹೋದರಿ ಭವ್ಯ ಗೌಡ ಅವರು ರವಿಕುಮಾರ್, ಪ್ರೇಮ, ನಂದೀಶ್ ಮತ್ತು ಪ್ರಿಯಾ ಎಂಬುವವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ರಾಮಮೂರ್ತಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.






