ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತು ಪ್ರೀತಿಸಿ ಮದುವೆಯಾದ ಎರಡೇ ವರ್ಷಕ್ಕೆ ಮಹಿಳೆ ಆತ್ಮಹತ್ಯೆ
Views: 41
ಕನ್ನಡ ಕರಾವಳಿ ಸುದ್ದಿ:ಮದುವೆಯಾದ ಎರಡೇ ವರ್ಷದಲ್ಲಿ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಯಡಿಯೂರಿನಲ್ಲಿ ನಡೆದಿದೆ. ಕೀರ್ತಿ ಶ್ರೀ(24) ಅತ್ಮಹತ್ಯೆ ಮಾಡಿಕೊಂಡ ಮಹಿಳೆ.
2023ರ ನವೆಂಬರ್‌ನಲ್ಲಿ ಕೀರ್ತಿ ಶ್ರೀ ಮತ್ತು ಗುರುಪ್ರಸಾದ್ ವಿವಾಹವಾಗಿದ್ದರು. ಸುಮಾರು 35 ಲಕ್ಷ ಖರ್ಚು ಮಾಡಿ 400 ಗ್ರಾಂ ಚಿನ್ನ ಜತೆಗೆ 5 ಲಕ್ಷ ಹಣವನ್ನು ನಗದಾಗಿ ನೀಡಿ ಮದುವೆ ಮಾಡಿ ಕೊಟ್ಟಿದ್ದರು. ಇಷ್ಟಾದರೂ ಗುರುಪ್ರಸಾದ್ ಮತ್ತು ಆತನ ಮನೆಯವರು ಹಣಕ್ಕಾಗಿ ಕೀರ್ತಿ ಶ್ರೀಗೆ ನಿತ್ಯ ಕಿರುಕುಳ ನೀಡುತ್ತಿದ್ದರು. ಹಾಗಾಗಿ ಅವರೇ ಕೊಲೆ ಮಾಡಿದ್ದಾರೆ ಎಂದು ಮೃತ ಕೀರ್ತಿ ಶ್ರೀ ತಂದೆ ಆರೋಪಿಸಿದ್ದಾರೆ.
ಈ ಹಿಂದೆ ಕೀರ್ತಿ ಶ್ರೀಯನ್ನು ಗಂಡನ ಮನೆಯವರು ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದರು. ಅಷ್ಟೇ ಅಲ್ಲದೇ, ಬಾತ್‌ರೂಮ್‌ನಲ್ಲಿ ಕೂಡಿಹಾಕಿ ಹೊಡೆದು ದೈಹಿಕವಾಗಿ ಹಿಂಸೆ ನೀಡುತ್ತಿದ್ದರು. ಗಂಡನ ಮನೆಯವರು ನೀಡುವ ಕಿರುಕುಳದ ಬಗ್ಗೆ ಮೃತ ಕೀರ್ತಿ ಶ್ರೀ ತಂದೆ ತಾಯಿ ಬಳಿ ಮುಚೆಯೇ ಹೇಳಿಕೊಂಡಿದ್ದಳು.
ಜನವರಿ 25ರಂದು ಎಲ್ಲರ ಮುಂದೆಯೇ ನಾವು ಕೇಳಿದಷ್ಟು ವರದಕ್ಷಿಣೆ ಕೊಟ್ಟಿಲ್ಲ ಎಂದು ಹೇಳಿ, ಮನೆ ಕಟ್ಟಲು 10 ಲಕ್ಷ ರೂ. ಕೊಡಿ ಆಮೇಲೆ ಬಾಕಿದು ನೋಡೋಣ ಎಂದು ನೇರವಾಗಿಯೇ ಗಂಡನ ಮನೆಯವರು ಕೇಳಿದ್ದಾರೆ ಎನ್ನಲಾಗಿದೆ. ಆ ವೇಳೆ ಎಂಟು ಲಕ್ಷ ಹಣ ಕೊಟ್ಟಿದ್ದರೂ ಕೂಡ ಕಿರುಕುಳ ತಪ್ಪಿರಲಿಲ್ಲ ಎಂದು ಆರೋಪಿಸಿದ್ದಾರೆ.
ಆದ್ದರಿಂದ ಇದು ಆತ್ಮಹತ್ಯೆ ಅಲ್ಲ, ಗಂಡ ಮತ್ತು ಆತನ ಮನೆಯವರು ಕೀರ್ತಿಯನ್ನು ಕೊಲೆ ಮಾಡಿದ್ದಾರೆ ಎಂದು ಮೃತ ಕೀರ್ತಿ ತಂದೆ ಲಿಖಿತ ದೂರು ನೀಡಿದ್ದಾರೆ.
ಈ ಕುರಿತು ದೂರು ದಾಖಲಿಸಿಕೊಂಡ ಬನಶಂಕರಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸದ್ಯ ಮೃತ ಕೀರ್ತಿ ಶ್ರೀಯ ಗಂಡ ಗುರುಪ್ರಸಾದ್ ಸೇರಿ 5 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.






