ಮದುವೆ ಮಂಟಪದಲ್ಲಿ ಹಾರ ಹಾಕುವಾಗಲೇ ಗುಂಡು ಹಾರಿಸಿದ ಪ್ರಿಯಕರ: ಕುಸಿದು ಬಿದ್ದ ವಧು
Views: 39
ಕನ್ನಡ ಕರಾವಳಿ ಸುದ್ದಿ:ಮದುವೆ ಮಂಟಪದಲ್ಲಿ ಹಾರ ಬದಲಾಯಿಸುತ್ತಿರುವಾಗಲೇ ಯುವಕನೊಬ್ಬ ತನ್ನ ಪ್ರೇಯಸಿಗೆ ಗುಂಡು ಹಾರಿಸಿದ ಘಟನೆ ಬಿಹಾರದ ಬಕ್ಸಾರ್ನ ಮುಫುಸಿಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೌಸಾ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಗುಂಡಿನ ದಾಳಿ ನಡೆಯುತ್ತಿದ್ದಂತೆ ಮದುವೆ ಮನೆ ಅಲ್ಲೋಲಕಲ್ಲೋಲವಾಗಿದೆ. ಗುಂಡು ಹಾರಿಸಿದ ಪ್ರಿಯಕರ ಸ್ಥಳದಿಂದ ಪರಾರಿಯಾಗಿದ್ದಾನೆ.
ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಚೌಸಾಗೆ ಮದುವೆ ಮೆರವಣಿಗೆ ಆಗಮಿಸಿತ್ತು. ಮದುವೆಯ ವಿಧಿವಿಧಾನಗಳು ಎಲ್ಲವೂ ಪೂರ್ವನಿಗದಿಯಂತೆ ನಡೆಯುತ್ತಿದ್ದವು. ವಧು ಜಯಮಾಲಾ ಸಮಾರಂಭಕ್ಕೆ ವೇದಿಕೆ ತಲುಪುತ್ತಿದ್ದಂತೆ, ಪಕ್ಕದಲ್ಲೇ ಇದ್ದ ಆರೋಪಿ ಯುವಕನೂ ವೇದಿಕೆಯ ಮೇಲೆ ಹತ್ತಿದ್ದಾನೆ. ಆತನನ್ನು ತಡೆಯುವ ಮೊದಲೇ, ವಧುವಿಗೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ವಧು ಗಂಭೀರವಾಗಿ ಗಾಯಗೊಂಡು ಕುಸಿದು ಬಿದ್ದಳು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ವಧುವಿಗೆ ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು ಆಕೆಯ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿ, ವಾರಣಾಸಿಗೆ ಕಳುಹಿಸಿದ್ದಾರೆ. ಗುಂಡು ಆಕೆಯ ದೇಹದ ಸೂಕ್ಷ್ಮ ಭಾಗಕ್ಕೆ ತಗುಲಿದೆ ಎಂದು ವರದಿಯಾಗಿದೆ.
ಸ್ಥಳೀಯರು ಹೇಳುವಂತೆ, ಪ್ರೇಮ ಪ್ರಕರಣ ಸಂಬಂಧ ಈ ದಾಳಿ ನಡೆದಿದೆ. ಯುವಕ ವಧುವಿನ ನೆರೆಮನೆಯವ. ಇಬ್ಬರೂ ಪ್ರೀತಿಸುತ್ತಿದ್ದರು. ಯುವತಿ ಬೇರೆ ಯುವಕನೊಂದಿಗೆ ಮದುವೆಯಾಗುತ್ತಿದ್ದುದಕ್ಕೆ ಆರೋಪಿ ಕೋಪಗೊಂಡಿದ್ದ. ಈ ದ್ವೇಷದಿಂದ ಕೃತ್ಯ ಎಸಗಿದ್ದಾನೆ.
ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.
ಘಟನಾ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಪ್ರತ್ಯಕ್ಷದರ್ಶಿಗಳಿಂದಲೂ ಮಾಹಿತಿ ಕಲೆಹಾಕಲಾಗುತ್ತಿದೆ. ಪರಾರಿಯಾಗಿರುವ ಆರೋಪಿಯನ್ನು ಬಂಧಿಸಲು ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆರೋಪಿಯನ್ನು ಗುರುತಿಸಲಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.






