ಪಿಎಸ್‌ಐ ಅನುಮಾನಾಸ್ಪದ ಸಾವು: ಕಾಂಗ್ರೆಸ್‌ಗೆ ಮುಜುಗರ..! ಬಿಜೆಪಿ-ಜೆಡಿಎಸ್‌ಗೆ ರಾಜಕೀಯ ಅಸ್ತ್ರ..!

Views: 65
ಬೆಂಗಳೂರು, ಪಿಎಸ್‌ಐ ಪರಶುರಾಮ್ ಅವರ ಅನುಮಾನಾಸ್ಪದ ಸಾವು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿವೆ. ಪ್ರಕರಣವನ್ನು ಬಿಜೆಪಿ-ಜೆಡಿಎಸ್ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವುದು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದಿದೆ.ದೋಸ್ತಿ ಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿಗೆ ಪಿಎಸ್‌ಐ ಪರಶುರಾಮ್ ಪ್ರಕರಣ ಈಗ ಮತ್ತೊಂದು ರಾಜಕೀಯ ಅಸ್ತ್ರವಾಗಿ ಸಿಕ್ಕಂತಾಗಿದೆ.
ವಿಪಕ್ಷಗಳ ಆರೋಪಗಳಿಗೆ ಪ್ರತಿಪಕ್ಷ ಕಾಂಗ್ರೆಸ್ ಸಹ ತಿರುಗೇಟು ನೀಡಿದೆಯಾದರೂ ಪಿಎಸ್‌ಐ ಪರಶುರಾಮ್ ಪ್ರಕರಣದಲ್ಲಿ ಪತ್ನಿ ಮಾಡಿರುವ ನೇರ ಆರೋಪದಿಂದ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ.
ಈ ಕಾರಣಕ್ಕಾಗಿ ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆಸುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಈಗಾಗಲೇ ಹೇಳಿದ್ದು, ಪಿಎಸ್‌ಐ ಪರಶುರಾಮ್ ರವರ ಪತ್ನಿಗೆ ಉದ್ಯೋಗ ನೀಡುವುದಾಗಿಯೂ ಹೇಳಿದ್ದಾರೆ.
ಪಿಎಸ್‌ಐ ಪರಶುರಾಮ್ ಸಾವಿನ ವಿಚಾರವಾಗಿ ಅವರ ಪತ್ನಿ ನೀಡಿದ ದೂರಿನ ಬಗ್ಗೆ ತನಿಖೆ ನಡೆಸಲು ಡಿವೈಎಸ್ಪಿ ಜಾವೇದ್ ಇನಾಂದಾರ್ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಆರೋಪಿಗಳನ್ನು ಬಂಧಿಸುವ ಬಗ್ಗೆ ಪೊಲೀಸರು ತೀರ್ಮಾನ ಕೈಗೊಳ್ಳಲಿದ್ದಾರೆ.
ಏನಿದು ಪ್ರಕರಣ?
ಪರಿಶಿಷ್ಟ ಜಾತಿಗೆ ಸೇರಿದ ಪಿಎಸ್‌ಐ ಪರಶುರಾಮ್ ರವರು ಕಳೆದ ಶುಕ್ರವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದರು.
ನಗರಠಾಣೆಯಲ್ಲಿ ಮುಂದುವರೆಸಲು30 ಲಕ್ಷ ರೂ. ನೀಡುವಂತೆ ಶಾಸಕರು ಹಾಗೂ ಅವರ ಪುತ್ರ ಬೇಡಿಕೆ ಇಟ್ಟಿದ್ದರು. ಅವಧಿ ಮುಗಿಯುವವರೆಗೂ ನಗರಠಾಣೆಯಲ್ಲಿ ಮುಂದುವರೆಯುವಂತೆ ಕೋರಿದ್ದರೂ ಶಾಸಕರು ಹಾಗೂ ಅವರ ಪುತ್ರ ಹಣ ಕೊಡದಿದ್ದರೆ ಇಲ್ಲಿ ಏಕೆ ಇರುತ್ತೀಯಾ ಎಂದು ಬೈದು ಜಾತಿ ನಿಂದನೆ ಮಾಡಿದ್ದರು. ಇದರಿಂದ ತಮ್ಮ ಪತಿ ಖಿನ್ನತೆಗೆ ಒಳಗಾಗಿದ್ದರು ಎಂದು ಪತ್ನಿ ದೂರಿದ್ದಾರೆ.
ಈ ಪ್ರಕರಣ ಈಗ ರಾಜ್ಯಾದ್ಯಂತ ಸದ್ದು ಮಾಡಿದ್ದು, ಕಾಂಗ್ರೆಸ್ ಶಾಸಕರ ಹಾಗೂ ಅವರ ಪುತ್ರನ ಹಣದ ಬೇಡಿಕೆಯಿಂದ ನೊಂದು ಪಿಎಸ್‌ಐ ಪರಶುರಾಮ್ ಖಿನ್ನತೆಗೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.






