ರಾಜಕೀಯ

ಮುಖ್ಯಮಂತ್ರಿ ಗದ್ದುಗೆ: ಸಿದ್ದು-ಡಿಕೆಶಿ ಬಣ  ಜಟಾಪಟಿ,ಮಹತ್ವದ ಬೆಳವಣಿಗೆಯಲ್ಲಿ ಸೋನಿಯಾ ಪ್ರಸ್ತಾಪಿಸಿದ್ದು ಯಾರನ್ನು?

Views: 135

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಭಾನುವಾರ ತಮ್ಮ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿಕೊಂಡಿದ್ದು, ಈ ವೇಳೆ  ಖರ್ಗೆಯವರ ನಿವಾಸದೆದುರು ನೆರೆದಿದ್ದ ಅವರ ಬೆಂಬಲಿಗರು, ಖರ್ಗೆ ಮುಂದಿನ ಮುಖ್ಯಮಂತ್ರಿಯಾಗಬೇಕೆಂದು ಘೋಷಣೆಗಳನ್ನು ಕೂಗಿದರು.

ಮುಖ್ಯಮಂತ್ರಿ ಹುದ್ದೆ ಕುರಿತು ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪಾಳಯದಲ್ಲಿ ಜಟಾಪಟಿ ಮುಂದುವರೆದಿದ್ದು, ಭಿನ್ನಾಭಿಪ್ರಾಯಗಳಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಖರ್ಗೆಯವರ ಹೆಸರು ಪ್ರಸ್ತಾಪಿಸುವಂತೆ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದಾರೆಂದು ಕೈ ಪಾಳಯದಲ್ಲಿ ಕೇಳಿ ಬಂದಿದೆ.

ಇತ್ತೀಚೆಗೆ ಸಿದ್ದರಾಮಯ್ಯ ಅವರು ನವದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸೋನಿಯಾ ಅವರು ಈ ಸಲಹೆ ನೀಡಿದ್ದಾರೆನ್ನಲಾಗಿದ್ದು, ಬೆಂಬಲಿಗರು ವಿವಾದ ಹುಟ್ಟು ಹಾಕುವುದನ್ನು ನಿಯಂತ್ರಿಸಬೇಕೆಂದೂ ಸೂಚಿಸಿದ್ದಾರೆಂದು ತಿಳಿದುಬಂದಿದೆ.

ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರು  ವಿರೋಧ ಪಕ್ಷದ ನಾಯಕರಾಗಿ ಹೊರಹೊಮ್ಮುತ್ತಿರುವುದರಿಂದ ಖರ್ಗೆ ಅವರ ಹೆಸರನ್ನು ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ,

ರಾಜ್ಯಸಭೆಯಲ್ಲಿ ಖರ್ಗೆ ಅವರಿಗೆ ವಿಪಕ್ಷದ ನಾಯಕನ ಅವಕಾಶ ಕಡಿಮೆಯಾಗಿದ್ದು, ಎಐಸಿಸಿ ಅಧ್ಯಕ್ಷ ಸ್ಥಾನ ಉತ್ತರ ಭಾರತದ ನಾಯಕರೊಬ್ಬರಿಗೆ ನೀಡುವ ಕುರಿತು ಚಿಂತನೆಗಳಿವೆ. ಇದಲ್ಲದೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಹಗರಣಗಳಿಂದ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದ್ದು, ಡ್ಯಾಮೇಜ್ ಕಂಟ್ರೋಲ್ ಗಾಗಿ ಖರ್ಗೆಯವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಸೋನಿಯಾ ಬಯಸಿದ್ದಾರೆಂದು ಹೇಳಲಾಗುತ್ತಿದೆ.

ಖರ್ಗೆಯವರಿಗೆ ಸಿಎಂ ಸ್ಥಾನ ನೀಡಿದ್ದೇ ಆದರೆ, ಈ ನಿರ್ಧಾರವನ್ನು ಸಿದ್ದರಾಮಯ್ಯ, ಶಿವಕುಮಾರ್ ಸೇರಿದಂತೆ ರಾಜ್ಯ ಕಾಂಗ್ರೆಸ್‌ನ ಯಾವುದೇ ನಾಯಕರು ಪ್ರಶ್ನಿಸುವುದಿಲ್ಲ ಎಂದು ಮುಖಂಡರೊಬ್ಬರು ಹೇಳಿದ್ದಾರೆ.

 

Related Articles

Back to top button
error: Content is protected !!