ಮದುವೆ ಮಂಟಪದಲ್ಲಿ ಜಗಳ: ನನಗೆ ಈ ಮದುವೆ ಬೇಡವೇ ಬೇಡ ಎಂದು ನಿರಾಕರಿಸಿದ ವಧು!

Views: 190
ಕನ್ನಡ ಕರಾವಳಿ ಸುದ್ದಿ: ಹಸೆಮಣೆಯೇರೋ ಮೊದಲು ವಧು ಮದುವೆ ನಿರಾಕರಿಸಿರೋ ಘಟನೆ ಹಿರಿಯೂರಿನ ಬಲಿಜ ಕಲ್ಯಾಣ ಮಂಟಪದಲ್ಲಿ ನಡೆದಿದೆ. ನಿನ್ನೆ ರಾತ್ರಿ ರಿಸೆಪ್ಶನ್‌ನಲ್ಲಿ ಸುಮ್ಮನಿದ್ದ ವಧು ಬೆಳಗ್ಗೆ ಏಕಾಏಕಿ ಮದುವೆಯಾಗಲು ನಿರಾಕರಿಸಿದ್ದು, ಮಧುಮಗ ಕಂಗಾಲಾಗಿದ್ದಾನೆ.
ಚಿತ್ರದುರ್ಗದ ಹಿರಿಯೂರಿನ ಬಲಿಜ ಕಲ್ಯಾಣ ಮಂಟಪದಲ್ಲಿ ಜಗಳೂರು ಮೂಲದ ಮನೋಜ್ ಕುಮಾರ್, ಶಿರಾ ಮೂಲದ ಯುವತಿ ಮದುವೆ ನಿಶ್ಚಯಾಗಿತ್ತು. ವಧು-ವರ ಇಬ್ಬರು ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮನೋಜ್ ಕುಮಾರ್ ಹಾಗೂ ವಧು ಪರಸ್ಪರ ಒಪ್ಪಿ ಮದುವೆ ಆಗಲು ಮುಂದಾಗಿದ್ದರು.
ಮದುವೆ ಮಂಟಪದಲ್ಲಿ ರಾತ್ರಿ ವಧು ಕಡೆಯವರು ವರನ ಕಡೆಯವರಿಗೆ ಕುಡಿಯಲು ನೀರು ಕೊಡದೆ ಕಿರಿಕ್ ಮಾಡಿದ್ದರಂತೆ. ನೀರು ಕೊಡದಿದ್ದಕ್ಕೆ ಎರಡು ಕಡೆಯವರ ನಡುವೆ ಜಗಳ, ಮನಸ್ತಾಪ ಉಂಟಾಗಿದೆ.
ಕುಡಿಯೋ ನೀರಿನ ಗಲಾಟೆಗೆ ಲಕ್ಷ, ಲಕ್ಷ ಖರ್ಚು ಮಾಡಿ ಮದುವೆ ಮಾಡುತ್ತಿದ್ದ ಪೋಷಕರು ಶಾಕ್ ಆಗಿದ್ದಾರೆ. ರಾತ್ರಿ ನೀರಿನ ಜಗಳ ಮರೆತು ಮದುವೆಗೆ ಒಪ್ಪುವಂತೆ ವರನ ಕಡೆಯವರು ಮನವಿ ಮಾಡಿದ್ದಾರೆ. ಆದರೆ ಈ ವರನ ಜೊತೆ ನನಗೆ ಮದುವೆ ಬೇಡವೇ ಬೇಡ ಎಂದು ವಧು ನಿರಾಕರಿಸಿದ್ದಾಳೆ. ಮದುವೆ ಮುರಿದು ಬೀಳುತ್ತಿದ್ದಂತೆ ಕಲ್ಯಾಣ ಮಂಟಪದಿಂದ ಸಂಬಂಧಿಕರು ಗಂಟು ಮೂಟೆ ಕಟ್ಟಿ ಮನೆಗೆ ತೆರಳಿದ್ದಾರೆ.