ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದ ಹುಡುಗಿ ಭೇಟಿಗಾಗಿ ಪ್ರಯಾಣಿಸಿದ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ

Views: 273
ಕನ್ನಡ ಕರಾವಳಿ ಸುದ್ದಿ: ಫೇಸ್‌ಬುಕ್ ಮೂಲಕ ಸ್ನೇಹ ಬೆಳೆಸಿಕೊಂಡಿದ್ದ ಹುಡುಗಿಯನ್ನು ಭೇಟಿಯಾಗಲು ಸುಮಾರು 100 ಕಿ.ಮೀ ಪ್ರಯಾಣಿಸಿದ ಯುವಕನೊಬ್ಬನನ್ನು ಆಕೆಯ ಕುಟುಂಬದವರು ಕಟ್ಟಿಹಾಕಿ 13 ಗಂಟೆಗಳ ಕಾಲ ಥಳಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಸಂತ್ರಸ್ತ ಯುವಕ ರೇವಾ ಜಿಲ್ಲೆಯ ನಿವಾಸಿ. ಆತ ಬಾಲಕಿಯನ್ನು ಭೇಟಿಯಾಗಲು ಕಳೆದ ಶನಿವಾರ ಮೌಗಂಜ್‌ನ ಪಿಪ್ರಾಹಿ ಗ್ರಾಮಕ್ಕೆ ಹೋಗಿದ್ದ. ಈ ವೇಳೆ ಬಾಲಕಿಯ ಕುಟುಂಬ ಸದಸ್ಯರು ಆತನ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ಹಾಕಿ, ಶನಿವಾರ ರಾತ್ರಿ 9 ಗಂಟೆಯಿಂದ ಮರುದಿನ ಬೆಳಗ್ಗೆ 10 ಗಂಟೆಯವರೆಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸತತ 13 ಗಂಟೆಗಳ ಕಾಲ ನಡೆದ ಚಿತ್ರಹಿಂಸೆಯನ್ನು ವಿಡಿಯೋ ರೆಕಾರ್ಡ್ ಕೂಡ ಮಾಡಲಾಗಿದೆ. ಹಲವಾರು ವಿಡಿಯೋ ತುಣುಕುಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಘಟನೆ ಬಗ್ಗೆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಆರ್.ಎಸ್. ಪ್ರಜಾಪತಿ ಅವರು ಮಾತನಾಡಿದ್ದಾರೆ. ಸಂತ್ರಸ್ತ ಯುವಕ ಬೈಕುಂತ್‌ಪುರದ ನಿವಾಸಿ. ಆತ ಫೇಸ್‌ಬುಕ್‌ನಲ್ಲಿ ಬಾಲಕಿಯೊಂದಿಗೆ ಸ್ನೇಹ ಬೆಳೆಸಿದನು. ನಂತರ ಆಕೆಯನ್ನು ಭೇಟಿಯಾಗಲು ಬಂದಿದ್ದ. ಈ ವೇಳೆ ಆತನನ್ನು ಕಟ್ಟಿಹಾಕಿ ಆಕೆಯ ಕುಟುಂಬಸ್ಥರು ಥಳಿಸಿದ್ದಾರೆ. ಸದ್ಯಕ್ಕೆ ಈ ಘಟನೆ ಸಂಬಂಧ ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲ. ಆದರೂ, ಸಂಪೂರ್ಣ ಮಾಹಿತಿ ಸಂಗ್ರಹಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದರು.