ಯುವಜನ

ಪ್ರೇಮಿಯನ್ನು ವಿವಾಹವಾಗಲು ಓಡಿ ಹೋಗಿ…ಆತನ ಬದಲು ಬೇರೊಬ್ಬನನ್ನು ವರಿಸಿದ ಯುವತಿ

Views: 172

ಕನ್ನಡ ಕರಾವಳಿ ಸುದ್ದಿ: ಇಂದೋರ್‌ನ ಎಂಐಜಿ ಪ್ರದೇಶದ ನಿವಾಸಿ ಶ್ರದ್ಧಾ ತಿವಾರಿ ತನ್ನ ಪ್ರೇಮಿಯನ್ನು ವಿವಾಹವಾಗಲು ಓಡಿ ಹೋಗಿದ್ದು, ಬಳಿಕ ಆತನ ಬದಲು ಬೇರೊಬ್ಬನನ್ನು ವರಿಸಿದ್ದ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

22 ವರ್ಷದ ಶ್ರದ್ಧಾ ತಿವಾರಿ ಇಂದೋರ್‌ನ ಎಂಐಜಿ ಪ್ರದೇಶದ ನಿವಾಸಿ. ಇಂದೊರ್‌ನಲ್ಲಿಯೆ ಈಕೆ ಬಿಬಿಎ ವಿದ್ಯಾಭ್ಯಾಸ ಮಾಡುತ್ತಿದ್ದಳು. ಆಗ ಆಕೆಗೆ ಸಾರ್ಥಕ್ ಎಂಬ ವ್ಯಕ್ತಿಯ ಪರಿಚಯವಾಗಿ ಬಳಿಕ ಅದು ಸ್ನೇಹ, ಪ್ರೀತಿಗೆ ತಿರುಗಿದೆ. ಮನೆಯವರು ತನ್ನ ಪ್ರೀತಿಗೆ ವಿರೋಧ ಮಾಡುತ್ತಾರೆ ಎಂಬ ಕಾರಣಕ್ಕೆ ತನ್ನ ಪ್ರೇಮಿ ಸಾರ್ಥಕ್‌ನನ್ನು ಮದುವೆಯಾಗಲು ಮನೆಬಿಟ್ಟು ಓಡಿ ಹೋಗಿದ್ದಾಳೆ.

ಮನೆ ಬಿಟ್ಟು ಬಂದು ಹೇಗಾದರೂ ತನ್ನ ಪ್ರೇಮಿ ಸಾರ್ಥಕ್‌ನನ್ನು ಮದುವೆಯಾಗ ಬೇಕು ಅಂದುಕೊಂಡು ರೈಲ್ವೇ ಸ್ಟೇಶನ್‌ಗೆ ಬಂದ ಆಕೆಗೆ ದೊಡ್ಡ ಆಘಾತವಾಗಿದೆ. ತನ್ನನ್ನು ಕರೆದೊಯ್ಯಲು ಪ್ರೇಮಿ ಆಗಮಿಸದ ಹಿನ್ನಲೆಯಲ್ಲಿ ಆಕೆಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ. ಇಂದೋರ್ ರೈಲ್ವೆ ನಿಲ್ದಾಣಕ್ಕೆ ಆತ ಬರದೆ ಶ್ರದ್ಧಾಗೆ ಕೈಕೊಟ್ಟಿದ್ದು ಮದುವೆಯಾಗುವುದಕ್ಕೂ ನಿರಾಕರಿಸಿದ್ದಾನೆ. ಶ್ರದ್ಧಾ ಮುಂದಿನ ದಾರಿ ಏನೆಂದು ತಿಳಿಯದೇ ಮನೆಗೆ ವಾಪಾಸಾಗಲು ಭಯವಾಗಿ ಏನಾದರಾಗಲಿ ಎಂದು ರೈಲು ಹತ್ತಿದಳು. ಕೆಲವು ಗಂಟೆಗಳ ಅನಂತರ ರತ್ಲಂ ನಿಲ್ದಾಣದಲ್ಲಿ ಆಕೆ ಇಳಿದಿದ್ದಾಳೆ. ಅದೇ ರೈಲ್ವೇ ನಿಲ್ದಾಣದಲ್ಲಿ ಅಕೆಯು ಇಂದೋರ್‌ನ ತನ್ನ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಎಲೆಕ್ಟ್ರಿಷಿಯನ್ ಕರಣ್‌ದೀಪ್‌ನನ್ನು ಭೇಟಿಯಾದಳು. ಬಳಿಕ ಆಕೆ ತನ್ನ ಪರಿಸ್ಥಿತಿಯನ್ನು ಕರಣ್ ದೀಪ್ ಜತೆಗೆ ಹೇಳಿಕೊಂಡಳು. ಅದಕ್ಕೆ ಕರಣ್, ಪೋಷಕರಿಗೆ ವಿಚಾರ ತಿಳಿಸಿ ಕ್ಷಮೆ ಕೇಳುವಂತೆ ಸಲಹೆ ನೀಡಿದ್ದ. ಆದರೆ ಇದು ಅವಳಿಗೆ ಇಷ್ಟವಿರಲಿಲ್ಲ. ಕೊನೆಗೆ ಆತ ಆಕೆಯನ್ನು ತಾನೇ ಮದುವೆಯಾಗುವುದಾಗಿ ಹೇಳಿದ್ದ. ಅದಕ್ಕೆ ಆಕೆ ಕೂಡ ಒಪ್ಪಿಕೊಂಡಳು. ಹೀಗಾಗಿ ಅವರಿಬ್ಬರು ಖಾರ್ಗೋನ್ ಜಿಲ್ಲೆಯ ಮಹೇಶ್ವರ ಪಟ್ಟಣದ ಒಂದು ದೇಗುಲದಲ್ಲಿ ಮದುವೆಯಾಗಿದ್ದಾರೆ.

ಇತ್ತ ಮಗಳು ಪತ್ತೆಯಾಗದ ಕಾರಣ ಶ್ರದ್ಧಾಳ ತಂದೆ ಅನಿಲ್ ತಿವಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಹುಡುಕಿ ಕೊಟ್ಟವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದರು. 5 ದಿನಗಳ ನಂತರ ಶ್ರದ್ಧಾ ತನ್ನ ತಂದೆಗೆ ಕರೆ ಮಾಡಿ ಮಂದಸೌರ್‌ನಲ್ಲಿ ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಳು. ಬಳಿಕ ಇಬ್ಬರು ಇಂದೋರ್‌ಗೆ ಹಿಂತಿರುಗಿದರು. ಅಲ್ಲಿನ ಪೊಲೀಸ್ ಠಾಣೆಯಲ್ಲಿ ಕರಣ್‌ದೀಪ್ ಅವರನ್ನು ಮದುವೆಯಾಗಿರುವುದಾಗಿ ಆಕೆ ತಿಳಿಸಿದಳು. ಆದರೆ ಆಕೆಯ ಮನೆಯವರು ಈ ಮದುವೆಯನ್ನು ನಿರಾಕರಿಸಿದ್ದು ಬಳಿಕ ಫೋಟೊ ಕಂಡು ಅಂತಿಮವಾಗಿ ಈ ಮದುವೆಯನ್ನು ಒಪ್ಪಿಕೊಂಡಿದ್ದಾರೆ. ಶ್ರದ್ಧಾ ಅಪ್ರಾಪ್ತಳಲ್ಲದ ಕಾರಣ ಆಕೆಯ ಮದುವೆ ಕಾನೂನು ಸಮ್ಮತವಾಗಿದೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Related Articles

Back to top button