ನರ್ಸಿಂಗ್ ವಿದ್ಯಾರ್ಥಿನಿ ಆಟೋ ಡ್ರೈವರ್ ಜತೆ ಪ್ರೀತಿ, ಮಗಳನ್ನೇ ಕೊಲೆ ಮಾಡಿದ ತಂದೆ ಅರೆಸ್ಟ್

Views: 249
ಕನ್ನಡ ಕರಾವಳಿ ಸುದ್ದಿ: ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ತಂದೆಯೇ ಮಗಳ ಕತ್ತು ಹಿಸುಕಿ ಜೀವ ತೆಗೆದ ಘಟನೆ ಕಲಬುರ್ಗಿಯ ಮೇಳಕುಂದಾ ಗ್ರಾಮದಲ್ಲಿ ನಡೆದಿದೆ.
ಕವಿತಾ ಕೊಳ್ಳೂರ್ ಮೃತ ಯುವತಿ. ಕವಿತಾ ಅದೇ ಗ್ರಾಮದ ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು, ಮರ್ಯಾದಿಗೆ ಅಂಜಿ ಆಕೆಯ ತಂದೆ ಆಕೆಯನ್ನು ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲದೇ ಸಾಕ್ಷಿ ನಾಶಪಡಿಸಲು ಮಗಳ ಶವಕ್ಕೆ ಬೆಂಕಿ ಹಚ್ಚಿದ್ದಾನೆ. ಕವಿತಾ ಪಿಯುಸಿ ಮುಗಿಸಿ ನರ್ಸಿಂಗ್ ಕೋರ್ಸ್ ಓದುತ್ತಿದ್ದಳು. ಅದೇ ಗ್ರಾಮದ ಆಟೋ ಡ್ರೈವರ್ ಪ್ರೀತಿಸುತ್ತಿದ್ದಳಂತೆ.
ಕವಿತಾ ಪ್ರೀತಿ ವಿಚಾರ ತಿಳಿದು ಹೆತ್ತವರ ಆಕ್ರೋಶ ಹೊರ ಹಾಕಿದ್ದಾರೆ. ಮೊದಲು ಮಗಳಿಗೆ ಬುದ್ಧಿ ಹೇಳಿ ಸರಿದಾರಿಗೆ ತರಲು ನೋಡಿದ್ದಾರೆ. ಆದ್ರೆ ಯುವತಿ ಪ್ರೀತಿಸಿದ ಹುಡುಗನನ್ನು ಬಿಟ್ಟು ಕೊಡಲು ಒಪ್ಪದಿದ್ದಾಗ ಚಿತ್ರಹಿಂಸೆ ಕೊಟ್ಟಿದ್ದಾರಂತೆ. ಮೊನ್ನೆ ರಾತ್ರಿ ತಂದೆ ಶಂಕರ ಕೊಳ್ಳೂರ್ ಕವಿತಾ ಮೇಲೆ ಹಲ್ಲೆ ಮಾಡಿದ್ದನಂತೆ. ಕವಿತಾ ತಂದೆಗೆ ಸಹೋದರ ಸಂಬಂಧಿ ಶರಣಪ್ಪ, ದತ್ತಪ್ಪ ಎಂಬುವವರು ಸಾಥ್ ನೀಡಿದ್ದಾರೆ.
ಆರೋಪಿಗಳು ಮೊದಲು ಕವಿತಾ ಮೇಲೆ ಹಲ್ಲೆ ನಡೆಸಿದ್ದರಂತೆ. ನಂತರ ಕತ್ತು ಹಿಸಿಕಿ ಕೊಲೆ ಮಾಡಲಾಗಿದೆ. ಬಳಿಕ ಯಾರಿಗೂ ಅನುಮಾನ ಬರಬಾರದು ಎಂದು ಕ್ರಿಮಿನಾಶಕ ಸುರಿದು ಆತ್ಮಹತ್ಯೆ ಕಥೆ ಕಟ್ಟಲು ಯೋಜನೆ ರೂಪಿಸಿದ್ದರು. ಆಕೆಯ ಸಾವಿನ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸುದ್ದಿ ಹಬ್ಬಿಸಿ ಆತುರಾತುರವಾಗಿ ತಮ್ಮದೇ ಹೊಲದಲ್ಲಿ ಮಗಳ ಶವ ಸುಟ್ಟು ಹಾಕಿದ್ದಾರೆ. ಕವಿತಾಳ ಕೊಲೆ ಬಗ್ಗೆ ಫರಹತಾಬಾದ್ ಠಾಣೆಗೆ ಅನಾಮಧೇಯ ವ್ಯಕ್ತಿ ಕರೆ ಮಾಡಿ ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಕುಟುಂಬದವರನ್ನು ವಿಚಾರಿಸಿದಾಗ ತಂದೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಮಗಳ ಕೊಲೆ ಆರೋಪದಡಿ ತಂದೆ ಶಂಕರ್ ಕೊಳ್ಳೂರ್ ಅರೆಸ್ಟ್ ಮಾಡಿದ್ದಾರೆ. ಇನ್ನಿಬ್ಬರು ಆರೋಪಿಗಳು ತಲೆ ಮರಿಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಿದೆ.