ಗಂಡ ಹೆಂಡತಿ ಜಗಳ:ನಡುರಸ್ತೆಯಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡ ಪತಿ!

Views: 107
ಕನ್ನಡ ಕರಾವಳಿ ಸುದ್ದಿ: ಮಹಾರಾಜ್ ಗಂಜ್‍ನ ಚಹಾ ಮಾರಾಟಗಾರ ಸಬೀರ್ ಎಂಬಾತ ಪತ್ನಿಯೊಂದಿಗೆ ಜಗಳವಾಡಿ ಮನನೊಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ದೃಶ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಸ್ಥಳೀಯರು ಬೆಂಕಿ ನಂದಿಸಿ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದಾನೆ.
ವೈರಲ್ ವಿಡಿಯೊದಲ್ಲಿ ನಡುರಸ್ತೆಯಲ್ಲಿ ವ್ಯಕ್ತಿಯ ಮೈಮೇಲೆ ಬೆಂಕಿ ಧಗಧಗನೇ ಉರಿಯುತ್ತಿದ್ದು ಕಂಡ ಸ್ಥಳೀಯರು ಗಾಬರಿಯಿಂದ ಕಂಬಳಿ ತೆಗೆದುಕೊಂಡು ಬಂದು ಬೆಂಕಿಯನ್ನು ನಂದಿಸಲು ಹೆಣಗಾಡಿದ್ದಾರೆ. ಕೊನೆಗೆ ಹರಸಾಹಸ ಮಾಡಿ ಬೆಂಕಿಯನ್ನು ನಂದಿಸಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಸಬೀರ್ ಎಂದು ಗುರುತಿಸಲಾಗಿದ್ದು, ಈತ ಗ್ವಾಲಿಯರ್ ನಿವಾಸಿಯಾಗಿದ್ದು, ಕಲೆಕ್ಟರೇಟ್ ಚೌಕಿ ಬಳಿ ಚಹಾ ಅಂಗಡಿ ನಡೆಸುತ್ತಿದ್ದಾನಂತೆ. ಈತನಿಗೆ ಮದುವೆಯಾಗಿ ಏಳು ವರ್ಷಗಳಾಗಿವೆ. ಈ ದಂಪತಿಗೆ ಐದು ಮತ್ತು ಒಂದು ವರ್ಷದ ಇಬ್ಬರು ಹೆಣ್ಣುಮಕ್ಕಳಿದ್ದು, ಇವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರಂತೆ. ವರದಿಗಳ ಪ್ರಕಾರ, ಸಬೀರ್ ಕೆಲವು ದಿನಗಳಿಂದ ಹೆಂಡತಿಯ ಜೊತೆ ಆಗಾಗ್ಗೆ ಜಗಳವಾಡುತ್ತಿದ್ದನಂತೆ.ಆದರೆ ಇತ್ತೀಚೆಗೆ ಆಕೆಯೊಂದಿಗೆ ಜಗಳ ಮಾಡಿ ಮನನೊಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಪತ್ನಿಯೊಂದಿಗೆ ಜಗಳವಾಡುತ್ತ ಸಬೀರ್ ಪೆಟ್ರೋಲ್ ಬಾಟಲಿಯನ್ನು ತೆಗೆದುಕೊಂಡು ಅದನ್ನು ತನ್ನ ಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.